ಚೆನ್ನೈ, ಫೆಬ್ರವರಿ 26: ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ 25 ವರ್ಷಗಳ ಬಳಿಕ ಮಹತ್ವದ ಕಾನೂನು ಬೆಳವಣಿಗೆ ಸಂಭವಿಸಿದೆ. ಮದ್ರಾಸ್ ಹೈಕೋರ್ಟ್ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸುವ ಮೂಲಕ ಕೆಳ ನ್ಯಾಯಾಲಯ ನೀಡಿದ್ದ ಖುಲಾಸೆ ತೀರ್ಪನ್ನು ಎತ್ತಿಹಿಡಿದಿದೆ.
2000ರ ಜುಲೈ 30ರಂದು ತಮಿಳುನಾಡಿನ ದೊಡ್ಡಗಾಜನೂರಿನ ಫಾರ್ಮ್‌ಹೌಸ್‌ನಿಂದ ಡಾ. ರಾಜ್‌ಕುಮಾರ್ ಅವರನ್ನು ಕಾಡು ದರೋಡೆಗಾರ ವೀರಪ್ಪನ್ ಅಪಹರಿಸಿದ್ದ ಘಟನೆ ದೇಶವ್ಯಾಪಿ ಸಂಚಲನ ಮೂಡಿಸಿತ್ತು. 108 ದಿನಗಳ ಕಾಲ ನಡೆದ ಈ ನಾಟಕೀಯ ಬೆಳವಣಿಗೆ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ರಾಜಕೀಯ ಮತ್ತು ಕಾನೂನು ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಪ್ರಕರಣದಲ್ಲಿ ಒಟ್ಟು 14 ಮಂದಿಯನ್ನು ಆರೋಪಿಗಳನ್ನಾಗಿ ಗುರುತಿಸಲಾಗಿತ್ತು. ಎನ್‌ಕೌಂಟರ್‌ನಲ್ಲಿ ವೀರಪ್ಪನ್ ಸೇರಿ ನಾಲ್ವರು ಸಾವನ್ನಪ್ಪಿದ ನಂತರ, ಉಳಿದ ಒಂಬತ್ತು ಮಂದಿಯ ವಿರುದ್ಧ ದೀರ್ಘಾವಧಿ ವಿಚಾರಣೆ ಮುಂದುವರಿದಿತ್ತು. ಸುಮಾರು 10 ನ್ಯಾಯಮೂರ್ತಿಗಳು ಬದಲಾಗಿದ್ದ ಈ ಪ್ರಕರಣ 18 ವರ್ಷಗಳ ಬಳಿಕ 2018ರಲ್ಲಿ ಖುಲಾಸೆ ತೀರ್ಪಿನೊಂದಿಗೆ ಅಂತ್ಯಗೊಂಡಿತ್ತು.
ಆ ತೀರ್ಪನ್ನು ಪ್ರಶ್ನಿಸಿ 2019ರಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನು ಇದೀಗ ಹೈಕೋರ್ಟ್ ತಿರಸ್ಕರಿಸಿರುವುದರಿಂದ, ಎರಡು ದಶಕಗಳಿಗೂ ಹೆಚ್ಚು ಕಾಲ ಮುಂದುವರಿದಿದ್ದ ಈ ಕಾನೂನು ಹೋರಾಟಕ್ಕೆ ಅಂತಿಮ ತೆರೆ ಬಿದ್ದಂತಾಗಿದೆ.

