ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲೊಂದು ಆಗಿರುವ ಗೃಹ ಲಕ್ಷ್ಮೀ ಯೋಜನೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಮನೆ ಯಜಮಾನಿಗೆ ಪ್ರತಿ ತಿಂಗಳು 2,000 ರೂಪಾಯಿ ನೀಡುವ ಈ ಯೋಜನೆಯಡಿ, ಸತ್ತವರ ಬ್ಯಾಂಕ್ ಖಾತೆಗಳಿಗೆ ಸಹ ಹಣ ಜಮೆಯಾಗಿರುವುದು ಬೆಳಕಿಗೆ ಬಂದಿದೆ.
ಸರ್ಕಾರದ ಪ್ರಾಥಮಿಕ ಪರಿಶೀಲನೆಯಲ್ಲಿ, ರಾಜ್ಯದಾದ್ಯಂತ ಸುಮಾರು 69 ಸಾವಿರ ಸತ್ತವರ ಬ್ಯಾಂಕ್ ಖಾತೆಗಳಿಗೆ ಒಟ್ಟು 79 ಕೋಟಿ ರೂಪಾಯಿ ಗೃಹಲಕ್ಷ್ಮೀ ಹಣ ಪಾವತಿಯಾಗಿರುವುದು ಪತ್ತೆಯಾಗಿದೆ. ಇದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಉಂಟಾಗಿರುವುದಾಗಿ ತಿಳಿದುಬಂದಿದೆ.
ಈ ಹಿನ್ನೆಲೆ, ಸತ್ತವರ ಖಾತೆಗಳಿಗೆ ಜಮೆಯಾಗಿರುವ ಹಣವನ್ನು ವಾಪಸ್ ಪಡೆಯಲು ಸರ್ಕಾರ ಕ್ರಮ ಕೈಗೊಂಡಿದೆ. ಸಂಬಂಧಿತ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿರುವ ಸರ್ಕಾರ, ಎಷ್ಟು ಹಣ ಜಮೆಯಾಗಿದೆ ಎಂಬುದರ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸುತ್ತಿದೆ.
ಇನ್ನು, ಸತ್ತವರ ಕುಟುಂಬದ ಮುಂದಿನ ಅರ್ಹ ಮಹಿಳಾ ಸದಸ್ಯರು ಹೊಸದಾಗಿ ಗೃಹಲಕ್ಷ್ಮೀ ಯೋಜನೆ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಬೆಳವಣಿಗೆ ರಾಜ್ಯ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದ್ದು, ಯೋಜನೆಗಳ ಅನುಷ್ಠಾನದಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಪರಿಶೀಲನೆ ಅಗತ್ಯ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

