ಗಾಲೆ (ಶ್ರೀಲಂಕಾ)/ನವದೆಹಲಿ, ಮಾರ್ಚ್ 5: ಮಧ್ಯಪ್ರಾಚ್ಯದಲ್ಲಿ ಅಮೆರಿಕ–ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷ ಇದೀಗ ಹಿಂದೂ ಮಹಾಸಾಗರವರೆಗೂ ವಿಸ್ತರಿಸಿರುವ ಘಟನೆ ನಡೆದಿದೆ. ಭಾರತದ ವಿಶಾಖಪಟ್ಟಣಂನಲ್ಲಿ ನಡೆದ ಮಿಲನ್–2026 ನೌಕಾಪಡೆಯ ಸಮರಾಭ್ಯಾಸದಲ್ಲಿ ಭಾಗವಹಿಸಿ ವಾಪಸ್ಸಾಗುತ್ತಿದ್ದ ಇರಾನ್‌ನ ಅತ್ಯಾಧುನಿಕ ಯುದ್ಧನೌಕೆ ‘ಐರಿಸ್ ದೆನಾ’ (IRIS Dena) ಅನ್ನು ಅಮೆರಿಕದ ಜಲಾಂತರ್ಗಾಮಿ ಟಾರ್ಪಿಡೊ ದಾಳಿ ಮೂಲಕ ಮುಳುಗಿಸಲಾಗಿದೆ ಎಂದು ವರದಿಯಾಗಿದೆ.
ಶ್ರೀಲಂಕಾದ ಗಾಲೆ ಕರಾವಳಿಯಿಂದ ಸುಮಾರು 40 ನಾಟಿಕಲ್ ಮೈಲಿ ದೂರದ ಅಂತರಾಷ್ಟ್ರೀಯ ಜಲಪ್ರದೇಶದಲ್ಲಿ ಈ ದಾಳಿ ನಡೆದಿದೆ. ಈ ಘಟನೆಯಲ್ಲಿ ಹಡಗಿನಲ್ಲಿದ್ದ 180 ಸಿಬ್ಬಂದಿಗಳ ಪೈಕಿ 87 ಮಂದಿ ಸಾವನ್ನಪ್ಪಿರುವುದಾಗಿ ಶ್ರೀಲಂಕಾ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ದಾಳಿಯನ್ನು ದೃಢಪಡಿಸಿದ್ದು, “ಅಂತರಾಷ್ಟ್ರೀಯ ಜಲಪ್ರದೇಶದಲ್ಲಿ ಸಾಗುತ್ತಿದ್ದ ಇರಾನ್ ನೌಕೆಯನ್ನು ಅಮೆರಿಕದ ಜಲಾಂತರ್ಗಾಮಿ ಟಾರ್ಪಿಡೊ ಮೂಲಕ ಹೊಡೆದುರುಳಿಸಲಾಗಿದೆ” ಎಂದು ಹೇಳಿದ್ದಾರೆ. ಎರಡನೇ ಮಹಾಯುದ್ಧದ ನಂತರ ಶತ್ರು ರಾಷ್ಟ್ರದ ಯುದ್ಧನೌಕೆಯನ್ನು ಅಮೆರಿಕ ಟಾರ್ಪಿಡೊ ಮೂಲಕ ಮುಳುಗಿಸಿರುವ ಮೊದಲ ಘಟನೆ ಇದಾಗಿದೆ ಎಂದು ಪೆಂಟಗನ್ ಹೇಳಿದೆ.
ಶ್ರೀಲಂಕಾ ನೌಕಾಪಡೆ ಮತ್ತು ವಾಯುಪಡೆ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ 32 ನಾವಿಕರನ್ನು ರಕ್ಷಿಸಲಾಗಿದ್ದು, ಅವರನ್ನು ಗಾಲೆಯ ಕಾರಾಪಿಟಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಸುಮಾರು 60 ಮಂದಿ ನಾಪತ್ತೆಯಾಗಿದ್ದಾರೆ.
ಹಡಗು ಮುಳುಗಿದ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ತೈಲ ಸೋರಿಕೆಯಾಗಿ ಸಮುದ್ರ ಪರಿಸರಕ್ಕೆ ಹಾನಿಯಾಗುವ ಭೀತಿ ಎದುರಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರಿಂದ ಪಶ್ಚಿಮ ಏಷ್ಯಾದಲ್ಲಿ ಆರಂಭವಾದ ಸಂಘರ್ಷ ಹಿಂದೂ ಮಹಾಸಾಗರವರೆಗೂ ವ್ಯಾಪಿಸಿರುವುದು ಭಾರತಕ್ಕೆ ಭದ್ರತಾ ಹಾಗೂ ರಾಜತಾಂತ್ರಿಕ ಸವಾಲಾಗಿ ಪರಿಣಮಿಸಿದೆ. ಭಾರತದ ಆರ್ಥಿಕ ವಲಯ (EEZ) ಸಮೀಪದಲ್ಲಿ ದಾಳಿ ನಡೆದಿರುವುದರಿಂದ ಸಮುದ್ರ ಮಾರ್ಗದ ಸುರಕ್ಷತೆ ಬಗ್ಗೆ ಆತಂಕವೂ ಹೆಚ್ಚಾಗಿದೆ.

