ಬೆಂಗಳೂರು, ಮಾ.6: ಮುಖ್ಯಮಂತ್ರಿ Siddaramaiah ಅವರು ಇಂದು ವಿಧಾನಸಭೆಯಲ್ಲಿ ತಮ್ಮ ದಾಖಲೆ 17ನೇ ಬಜೆಟ್‌ನ್ನು ಮಂಡಿಸಿದ್ದು, 2026–27ನೇ ಸಾಲಿನ ರಾಜ್ಯ ಬಜೆಟ್ ಗಾತ್ರವನ್ನು 4.49 ಲಕ್ಷ ಕೋಟಿ ರೂ. ಎಂದು ಘೋಷಿಸಿದರು. ಮೂಲಭೂತ ಸೌಕರ್ಯ, ಕೃಷಿ, ಶಿಕ್ಷಣ ಹಾಗೂ ಮಹಿಳಾ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ಈ ಬಜೆಟ್‌ನ ಪ್ರಮುಖ ಲಕ್ಷಣವಾಗಿದೆ.
ಸರ್ಕಾರಿ ಇಲಾಖೆಗಳಲ್ಲಿರುವ 56,432 ಖಾಲಿ ಹುದ್ದೆಗಳ ಭರ್ತಿ ಮಾಡಲು ಸರ್ಕಾರ ನಿರ್ಧರಿಸಿದ್ದು, ಸರ್ಕಾರಿ ಉದ್ಯೋಗಗಳಿಗೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷ ಸಡಿಲಿಕೆ ನೀಡಲಾಗಿದೆ. ಬೆಂಗಳೂರಿನ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದ್ದು, ಮೂಲಸೌಕರ್ಯ ಅಭಿವೃದ್ಧಿಗೆ 8600 ಕೋಟಿ ರೂ. ಮೀಸಲಿಡಲಾಗಿದೆ.
ನಗರದ ರಸ್ತೆ ಅಭಿವೃದ್ಧಿಗಾಗಿ 158 ಕಿ.ಮೀ ವೈಟ್ ಟಾಪಿಂಗ್ ಕಾಮಗಾರಿಗೆ 1700 ಕೋಟಿ ರೂ., ಮುಖ್ಯ ಹಾಗೂ ಉಪಮುಖ್ಯ ರಸ್ತೆಗಳ ಅಭಿವೃದ್ಧಿಗೆ 1936 ಕೋಟಿ ರೂ. ಮೀಸಲಾಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್.ಪುರಂವರೆಗೆ ಹೊರ ವರ್ತುಲ ರಸ್ತೆ ಅಭಿವೃದ್ಧಿಗೆ 450 ಕೋಟಿ ರೂ. ಯೋಜನೆ ಘೋಷಿಸಲಾಗಿದೆ. ಜೊತೆಗೆ ಬೆಂಗಳೂರು ನಗರದಲ್ಲಿ 150 ಸ್ಕೈವಾಕ್‌ಗಳ ನಿರ್ಮಾಣ ಮತ್ತು ಕೆರೆಗಳ ಅಭಿವೃದ್ಧಿಗೆ 273 ಕೋಟಿ ರೂ. ಮೀಸಲಾಗಿದೆ.
ಮಹಿಳಾ ಕಲ್ಯಾಣ ಯೋಜನೆಗಳಿಗೆ ಸರ್ಕಾರ ವಿಶೇಷ ಗಮನ ನೀಡಿದ್ದು, ಗೃಹಲಕ್ಷ್ಮೀ ಯೋಜನೆಗೆ 28,608 ಕೋಟಿ ರೂ. ಮೀಸಲಾಗಿದೆ. ರಾಜ್ಯದ 1,39,844 ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚುವರಿ ಸಮವಸ್ತ್ರ ನೀಡಲಾಗುತ್ತದೆ. ಮಹಿಳೆಯರು ಮತ್ತು ಮಕ್ಕಳ ಸಂಕಷ್ಟಗಳಿಗೆ ಪ್ರತಿ ಜಿಲ್ಲೆಯಲ್ಲಿ ಅಕ್ಕ ಪಡೆ ರಚಿಸುವುದಾಗಿ ಘೋಷಿಸಲಾಗಿದೆ.
ಕೃಷಿ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, 83 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 70,000 ಕೋಟಿ ರೂ. ಸಾಲ, 51 ಲಕ್ಷ ರೈತರಿಗೆ 6213 ಕೋಟಿ ರೂ. ಬೆಳೆ ವಿಮೆ ಪರಿಹಾರ, ಹಾಗೂ 40 ಲಕ್ಷ ರೈತರಿಗೆ 468 ಕೋಟಿ ರೂ. ಬಿತ್ತನೆ ಬೀಜ ಸಹಾಯಧನ ನೀಡಲಾಗುತ್ತದೆ. ಜೊತೆಗೆ ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆಗೆ 100 ಕೋಟಿ ರೂ. ಮೀಸಲಾಗಿದೆ.
ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 2500 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ನಿರ್ಧರಿಸಿದೆ.
ವಿಭಾಗವಾರು ಅನುದಾನದಲ್ಲಿ ಶಿಕ್ಷಣಕ್ಕೆ 47,224 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ 34,929 ಕೋಟಿ ರೂ., ಇಂಧನ ಇಲಾಖೆಗೆ 29,947 ಕೋಟಿ ರೂ., ಗ್ರಾಮೀಣಾಭಿವೃದ್ಧಿಗೆ 26,559 ಕೋಟಿ ರೂ., ನೀರಾವರಿಗೆ 22,436 ಕೋಟಿ ರೂ., ಹಾಗೂ ಆರೋಗ್ಯಕ್ಕೆ 17,818 ಕೋಟಿ ರೂ. ಮೀಸಲಾಗಿದೆ.
ರಾಜ್ಯದ ಆರ್ಥಿಕ ಸ್ಥಿತಿಗೆ ಸಂಬಂಧಿಸಿದಂತೆ, 2025–26ನೇ ಸಾಲಿನಲ್ಲಿ ರಾಜ್ಯದ ಜಿಎಸ್‌ಡಿಪಿ 8.1 ಶೇಕಡಾ ನೈಜ ಬೆಳವಣಿಗೆ ದಾಖಲಿಸಿದೆ ಎಂದು ಸರ್ಕಾರ ತಿಳಿಸಿದೆ. ಮುಂದಿನ ವರ್ಷಕ್ಕೆ 15,000 ಕೋಟಿ ರೂ. ರಾಜಸ್ವ ಕೊರತೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ.
ಒಟ್ಟಾರೆ, ಮೂಲಸೌಕರ್ಯ ಅಭಿವೃದ್ಧಿ, ಕೃಷಿ ಬೆಂಬಲ, ಮಹಿಳಾ ಕಲ್ಯಾಣ ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡಿರುವ ಸಿದ್ದರಾಮಯ್ಯ ಅವರ 17ನೇ ಬಜೆಟ್ ರಾಜ್ಯದ ಅಭಿವೃದ್ಧಿಗೆ ದಿಕ್ಕು ನೀಡಲಿದೆ ಎಂದು ಸರ್ಕಾರ ಹೇಳಿದೆ.
ರಾಜ್ಯ ಬಜೆಟ್‌ನಲ್ಲಿ ಕ್ಷೇತ್ರವಾರು ಅನುದಾನ ಹಂಚಿಕೆ
ಬೆಂಗಳೂರು: 2026–27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ವಿವಿಧ ಇಲಾಖೆಗಳು ಮತ್ತು ಕ್ಷೇತ್ರಗಳಿಗೆ ಸರ್ಕಾರ ಮಹತ್ತರ ಪ್ರಮಾಣದಲ್ಲಿ ಅನುದಾನ ಹಂಚಿಕೆ ಮಾಡಿದೆ. ಮೂಲಸೌಕರ್ಯ ಅಭಿವೃದ್ಧಿ, ಕೃಷಿ, ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಕಲ್ಯಾಣ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಬಜೆಟ್‌ನಲ್ಲಿ ಪ್ರಮುಖವಾಗಿ ವಿವಿಧ ಇಲಾಖೆಗೆ ನೀಡಿರುವ ಅನುದಾನ ಹೀಗಿದೆ:
ಪಶುಸಂಗೋಪನೆ – 4,084 ಕೋಟಿ ರೂ.
ಕೃಷಿ ಮತ್ತು ತೋಟಗಾರಿಕೆ – 8,373 ಕೋಟಿ ರೂ.
ಆಹಾರ ಮತ್ತು ನಾಗರಿಕ ಸರಬರಾಜು – 7,942 ಕೋಟಿ ರೂ.
ಲೋಕೋಪಯೋಗಿ ಇಲಾಖೆ – 11,424 ಕೋಟಿ ರೂ.
ಸಮಾಜ ಕಲ್ಯಾಣ ಇಲಾಖೆ – 18,612 ಕೋಟಿ ರೂ.
ಕಂದಾಯ ಇಲಾಖೆ – 19,845 ಕೋಟಿ ರೂ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ – 17,818 ಕೋಟಿ ರೂ.
ಶಿಕ್ಷಣ ಇಲಾಖೆ – 47,224 ಕೋಟಿ ರೂ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ – 34,929 ಕೋಟಿ ರೂ.
ಇಂಧನ ಇಲಾಖೆ – 29,947 ಕೋಟಿ ರೂ.
ಗ್ರಾಮೀಣಾಭಿವೃದ್ಧಿ ಇಲಾಖೆ – 26,559 ಕೋಟಿ ರೂ.
ನೀರಾವರಿ ಇಲಾಖೆ – 22,436 ಕೋಟಿ ರೂ.
ನಗರಾಭಿವೃದ್ಧಿ ಮತ್ತು ವಸತಿ ಇಲಾಖೆ – 22,203 ಕೋಟಿ ರೂ.
ಒಳಾಡಳಿತ ಮತ್ತು ಬಂದರು ಇಲಾಖೆ – 23,100 ಕೋಟಿ ರೂ.
ಇತರೆ ವೆಚ್ಚ – 1,72,757 ಕೋಟಿ ರೂ.
ರಾಜ್ಯದ ಅಭಿವೃದ್ಧಿ ಹಾಗೂ ಜನಸೇವೆಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ವಿವಿಧ ಪ್ರಮುಖ ಕ್ಷೇತ್ರಗಳಿಗೆ ಈ ಬಜೆಟ್‌ನಲ್ಲಿ ದೊಡ್ಡ ಮೊತ್ತದ ಅನುದಾನವನ್ನು ಸರ್ಕಾರ ಮೀಸಲಿಟ್ಟಿದೆ.

