ವಿಜಯನಗರ : ವಿಜಯನಗರ ಜಿಲ್ಲೆಯಲ್ಲಿ ನಡೆದಿದ್ದ ಯುವಕನ ಭೀಕರ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ಆರೋಪಿಯಾಗಿದ್ದ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಬೀರಬ್ಬಿ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಹೆಂಡತಿಯ ಮೇಲಿನ ಅನುಮಾನದಿಂದ ತಂದೆಯೇ ತನ್ನ ಮಗನನ್ನು ಕ್ರೂರವಾಗಿ ಹತ್ಯೆ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಆರೋಪಿ ಲಕ್ಷ್ಮಪ್ಪ ಬಡಕ್ಕಪ್ಪನರ (55) ತನ್ನ ಮಗ ಬೀರೇಶ್‌ನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದು, ಬಳಿಕ ಶವವನ್ನು ತುಂಡು ತುಂಡಾಗಿ ಕತ್ತರಿಸಿ ಗೋಣಿ ಚೀಲದಲ್ಲಿ ತುಂಬಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಂಡತಿಯ ಅನೈತಿಕ ಸಂಬಂಧಕ್ಕೆ ಮಗ ಬೆಂಬಲ ನೀಡುತ್ತಿದ್ದಾನೆ ಎಂಬ ಶಂಕೆಯಿಂದ ಈ ಕೃತ್ಯ ಎಸಗಿರುವುದಾಗಿ ಆರೋಪಿ ತಪ್ಪೊಪ್ಪಿಗೆ ನೀಡಿದ್ದಾನೆ. ಸುಮಾರು 15 ದಿನಗಳ ಹಿಂದೆ ಬೀರೇಶ್ ಕಾಣೆಯಾಗಿದ್ದ ಪ್ರಕರಣ ತನಿಖೆ ವೇಳೆ ಈ ಭೀಕರ ಸತ್ಯ ಬೆಳಕಿಗೆ ಬಂದಿದೆ.
ಹೂವಿನಹಡಗಲಿ ಡಿವೈಎಸ್‌ಪಿ ವಸಂತ್ ಚೌವ್ಹಾನ್ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಮಲ್ಲಪ್ಪ ಹೂಗಾರ್ ಹಾಗೂ ಪಿಎಸ್ಐ ಭರತ್ ಪ್ರಕಾಶ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕೇವಲ 12 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಈ ಸಂಬಂಧ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

