ಬಳ್ಳಾರಿ, ಮಾ.8: ಬಳ್ಳಾರಿ ಜಿಲ್ಲೆಯ ಗುರುಕುಲ ವಸತಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬನ ಅಟ್ಟಹಾಸದಿಂದ ಭೀಕರ ಘಟನೆ ಸಂಭವಿಸಿದ್ದು, ಓರ್ವ ವಿದ್ಯಾರ್ಥಿ ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಶಾಲೆಯ ವಿದ್ಯಾರ್ಥಿಗಳ ಮನಸ್ಥಿತಿಯ ಬಗ್ಗೆ ಪ್ರಶ್ನೆ ಮಾಡುವಂತಾಗಿದೆ.
ಮೃತ ಬಾಲಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ತಡರಾತ್ರಿ ಹಾಸ್ಟೆಲ್‌ನಿಂದ ಕರೆ ಮಾಡಿ “ನಿಮ್ಮ ಮಗನಿಗೆ ಸೀರಿಯಸ್ ಆಗಿದೆ” ಎಂದು ತಿಳಿಸಿದರು ಎಂದು ಮೃತ ಬಾಲಕನ ತಂದೆ ಲಕ್ಷ್ಮೀಕಾಂತ ಹೇಳಿದ್ದಾರೆ. ಬಳಿಕ ಬಳ್ಳಾರಿಗೆ ಬಂದು ನೋಡಿದಾಗ ಮಗ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ ಎಂದು ಅವರು ದುಃಖ ವ್ಯಕ್ತಪಡಿಸಿದರು.
ಮೃತ ವಿದ್ಯಾರ್ಥಿ ಆಂಧ್ರಪ್ರದೇಶ ಮೂಲದ ಅದವಾನಿ ಗ್ರಾಮದ ಕುಟುಂಬಕ್ಕೆ ಸೇರಿದವನಾಗಿದ್ದಾನೆ ಎಂದು ತಿಳಿದುಬಂದಿದೆ.
ಪೋಷಕರ ಆರೋಪದ ಪ್ರಕಾರ, ವಿದ್ಯಾರ್ಥಿ ಇಷ್ಟು ಜನರ ಮೇಲೆ ಹಲ್ಲೆ ನಡೆಸಿರುವುದು ನೋಡಿದರೆ ಆತ ಗಾಂಜಾ ಸೇವಿಸಿದ್ದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ರಾತ್ರಿ ಊಟದ ಬಳಿಕ ಎಲ್ಲ ವಿದ್ಯಾರ್ಥಿಗಳು ಮಲಗಿದ್ದ ವೇಳೆ, ಹಾಸ್ಟೆಲ್‌ನಲ್ಲಿದ್ದ ಕೆಲವರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ.
ಮಂಚದ ಕಬ್ಬಿಣದ ರಾಡ್, ಸ್ಕ್ರೂಡ್ರೈವರ್ ಹಾಗೂ ರೆಡಿಯಂ ಕಟರ್ ಚಾಕುವನ್ನು ಬಳಸಿ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಈ ಘಟನೆಯಲ್ಲಿ ಒಬ್ಬ ವಿದ್ಯಾರ್ಥಿ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜೊತೆಗೆ ಇನ್ನೂ ಆರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಘಟನೆಯ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ದಾಳಿಯ ನಿಖರ ಕಾರಣ ಹಾಗೂ ನಿಜಾಂಶಗಳನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.

