ಚಿಕ್ಕಬಳ್ಳಾಪುರ, ಮಾರ್ಚ್ 09: ಬಾಗೇಪಲ್ಲಿ ತಾಲೂಕಿನ ಆಚೇಪಲ್ಲಿ ಕ್ರಾಸ್ ಸಮೀಪ ರಸ್ತೆ ಮಧ್ಯೆ ಕಾರು ಹೊತ್ತಿ ಉರಿದ ಪರಿಣಾಮ 65 ವರ್ಷದ ವ್ಯಕ್ತಿಯೊಬ್ಬರು ಸಜೀವ ದಹನವಾಗಿರುವ ದುರ್ಘಟನೆ ಸಂಭವಿಸಿದೆ. ಪೆನುಮಲೆ ಗ್ರಾಮದ ನಿವಾಸಿ ಉದಯ್ ಕುಮಾರ್ (65) ಮೃತ ಚಾಲಕರಾಗಿ ಗುರುತಿಸಲಾಗಿದೆ. ಅವರು ಕಳೆದ ರಾತ್ರಿ ಬಾಗೇಪಲ್ಲಿಯಿಂದ ತಮ್ಮ ಸ್ವಗ್ರಾಮಕ್ಕೆ ತೆರಳುವ ವೇಳೆ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಸ್ಥಳೀಯರ ಮಾಹಿತಿ ಪ್ರಕಾರ, ಬಾಲರೆಡ್ಡಿಪಳ್ಳಿ ಗ್ರಾಮದ ಸಮೀಪ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮಾರುತಿ 800 ಕಾರಿನಿಂದ ಏಕಾಏಕಿ ಹೊಗೆ ಎದ್ದಿರುವುದನ್ನು ಗ್ರಾಮಸ್ಥರು ಗಮನಿಸಿದ್ದಾರೆ. ತಕ್ಷಣವೇ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಬಾಗೇಪಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ಬಳಿಕ ಕಾರಿನೊಳಗೆ ವ್ಯಕ್ತಿಯೊಬ್ಬರು ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತದೇಹವನ್ನು ಹೊರತೆಗೆದು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಶವಪರೀಕ್ಷೆಗೆ ಕಳುಹಿಸಲಾಗಿದೆ.
ಮೃತ ಉದಯ್ ಕುಮಾರ್ ಅವರು ಹಲವು ವರ್ಷಗಳಿಂದ ಕುಟುಂಬ ಸಮೇತ ಬೆಂಗಳೂರಿನಲ್ಲಿ ವಾಸವಾಗಿದ್ದರು. ನಿನ್ನೆ ಮಧ್ಯಾಹ್ನ ತಮ್ಮ ತಾಯಿಯನ್ನು ಭೇಟಿ ಮಾಡಲು ಸ್ವಗ್ರಾಮ ಪೆನುಮಲೆಗೆ ಬಂದಿದ್ದರು. ನಂತರ ಮತ್ತೆ ಬೆಂಗಳೂರಿಗೆ ತೆರಳುವ ವೇಳೆ ಬಾಲರೆಡ್ಡಿಪಳ್ಳಿ ಸಮೀಪ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಈ ಘಟನೆ ಆತ್ಮಹತ್ಯೆಯೋ ಅಥವಾ ಆಕಸ್ಮಿಕವಾಗಿ ಕಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿತೋ ಎಂಬುದರ ಕುರಿತು ಸ್ಪಷ್ಟತೆ ಸಿಕ್ಕಿಲ್ಲ. ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮತ್ತು ಕುತೂಹಲ ಉಂಟಾಗಿದೆ. ಪೊಲೀಸರು ಮುಂದಿನ ತನಿಖೆ ಮುಂದುವರೆಸಿದ್ದಾರೆ.

