ಬಳ್ಳಾರಿ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕನೊಬ್ಬ ಇನ್ನೊಬ್ಬ ಬಾಲಕನನ್ನು ಹತ್ಯೆ ಮಾಡಿ, ಇನ್ನೂ ಏಳು ಬಾಲಕರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಬಳಿಕ ನಾಪತ್ತೆಯಾಗಿದ್ದ ಬಾಲಕನನ್ನು ಬಳ್ಳಾರಿಯ ಗಂಗಪ್ಪ ಜಿನ್ ಪ್ರದೇಶದಲ್ಲಿ ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ಪತ್ತೆಹಚ್ಚಲು ಬಳ್ಳಾರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಸುಮನ್ ಡಿ. ಪನ್ನೇಕರ್ ಅವರ ನಿರ್ದೇಶನದಲ್ಲಿ ಏಳು ತಂಡಗಳನ್ನು ರಚಿಸಲಾಗಿತ್ತು. ನಗರದ ವಿವಿಧ ಭಾಗಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ ಪೊಲೀಸರು, ಜಿಲ್ಲೆಯ ಹಾಗೂ ರಾಜ್ಯದ ಗಡಿ ಚೆಕ್ ಪೋಸ್ಟ್‌ಗಳಲ್ಲೂ ಕಠಿಣ ನಿಗಾವಹಿಸಿದ್ದರು. ಬಾಲಕ ಜಿಲ್ಲೆಯಿಂದ ಹೊರಗೆ ಹೋಗದಂತೆ ಪೊಲೀಸರು ಫುಲ್ ಅಲರ್ಟ್ ಆಗಿದ್ದರು.
ಘಟನೆ ನಡೆದ ನಂತರವೂ ಬಾಲಕ ಬಳ್ಳಾರಿಯಲ್ಲೇ ಸೈಕಲ್‌ನಲ್ಲಿ ಓಡಾಡುತ್ತಾ ಭಯಗೊಂಡು ಅಡಗಿ ಕುಳಿತಿದ್ದನು ಎಂದು ತಿಳಿದುಬಂದಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಬಾಲಕನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಅತ್ಯಂತ ಸೂಕ್ಷ್ಮವಾಗಿರುವುದರಿಂದ ಸೈಕಾಲಜಿಸ್ಟ್, ಸೈಕಿಯಾಟ್ರಿಸ್ಟ್, ಫಿಜಿಷಿಯನ್ ಹಾಗೂ ಮಕ್ಕಳ ತಜ್ಞರಿಂದ ಆರೋಪಿಗೆ ಕೌನ್ಸಲಿಂಗ್ ನಡೆಸಿದ ಬಳಿಕವೇ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಘಟನೆಗೆ ನಿಖರ ಕಾರಣ ಏನು ಎಂಬುದು ತನಿಖೆಯ ಬಳಿಕವೇ ಬಹಿರಂಗವಾಗಲಿದೆ ಎಂದು ಎಸ್ಪಿ ಡಾ. ಸುಮನ್ ಡಿ. ಪನ್ನೇಕರ್ ತಿಳಿಸಿದ್ದಾರೆ.

