ಇಸ್ಲಾಮಾಬಾದ್: ಭಾರತದೊಂದಿಗೆ ನಡೆದ ಸಂಘರ್ಷದ ಬಳಿಕ ಅಮೆರಿಕದೊಂದಿಗೆ ಗಾಢ ಸಂಬಂಧ ಬೆಳೆಸಿಕೊಂಡಿದ್ದ ಪಾಕಿಸ್ತಾನ ಇದೀಗ ತನ್ನ ಮಿತ್ರ ರಾಷ್ಟ್ರಕ್ಕೂ ಅಚ್ಚರಿ ಮೂಡಿಸುವ ಹೆಜ್ಜೆ ಇಟ್ಟಿದೆ. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯ ನಡುವೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಇರಾನ್‌ನ ನೂತನ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ ಅವರನ್ನು ಅಭಿನಂದಿಸಿರುವುದು ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದೆ.
ಶೆಹಬಾಜ್ ಷರೀಫ್ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ, “ಇರಾನ್ ಇಸ್ಲಾಮಿಕ್ ಗಣರಾಜ್ಯದ ಸರ್ವೋಚ್ಚ ನಾಯಕರಾಗಿ ಅಧಿಕಾರ ವಹಿಸಿಕೊಂಡ ಗೌರವಾನ್ವಿತ ಅಯತೊಲ್ಲಾ ಮೊಜ್ತಬಾ ಖಮೇನಿ ಅವರಿಗೆ ಅಭಿನಂದನೆಗಳು. ಅವರ ತಂದೆ ಅಯತೊಲ್ಲಾ ಅಲಿ ಖಮೇನಿ ಹಾಗೂ ಕುಟುಂಬದ ಸದಸ್ಯರ ಹುತಾತ್ಮತೆಗೆ ಪಾಕಿಸ್ತಾನದ ಜನರ ಪರವಾಗಿ ಸಂತಾಪ ಸೂಚಿಸುತ್ತೇನೆ. ಹೊಸ ನಾಯಕತ್ವದಲ್ಲಿ ಇರಾನ್ ಮುಂದಿನ ವರ್ಷಗಳಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯತ್ತ ಸಾಗಲಿದೆ ಎಂಬ ವಿಶ್ವಾಸವಿದೆ,” ಎಂದು ಬರೆದಿದ್ದಾರೆ.
ಈ ಪೋಸ್ಟ್ ಅಮೆರಿಕದೊಂದಿಗೆ ಪಾಕಿಸ್ತಾನದ ಸಂಬಂಧಗಳ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆ ಪಾಕಿಸ್ತಾನದ ಈ ನಡೆ ವಾಷಿಂಗ್ಟನ್ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿರುವುದಾಗಿ ವರದಿಯಾಗಿದೆ.
ಇದಕ್ಕೂ ಮೊದಲು ಇರಾನ್ ವಿರುದ್ಧ ಅಮೆರಿಕ ನಡೆಸಿದ ಡ್ರೋನ್ ದಾಳಿಗೆ ಪಾಕಿಸ್ತಾನ ತನ್ನ ನೆಲೆಗಳನ್ನು ಬಳಸಲು ಅನುಮತಿ ನೀಡಿದೆಯೇ ಎಂಬ ಊಹಾಪೋಹಗಳು ಕೇಳಿಬಂದಿದ್ದವು. ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಪಾಕಿಸ್ತಾನದ ಪಾತ್ರದ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ.
ಹಾಗೆಯೇ, ಇಸ್ಲಾಮಾಬಾದ್ ಅಮೆರಿಕದೊಂದಿಗೆ ಸಮನ್ವಯ ಕಾಯ್ದುಕೊಂಡಿರುವ ಸಂದರ್ಭದಲ್ಲೇ ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಗುರಿಯಾಗಿಸಿಕೊಂಡ ಅಮೆರಿಕದ ಕಾರ್ಯಾಚರಣೆಗಳಿಗೆ ಗುಪ್ತಚರ ಸಹಕಾರ ನೀಡಿದ ಆರೋಪಗಳನ್ನೂ ಎದುರಿಸಿತ್ತು. ಈಗ ಶೆಹಬಾಜ್ ಷರೀಫ್ ಅವರ ಅಭಿನಂದನಾ ಸಂದೇಶವು ಈ ವಿಷಯಕ್ಕೆ ಮತ್ತಷ್ಟು ರಾಜಕೀಯ ಮಹತ್ವ ನೀಡಿದೆ.

