ನೆಲಮಂಗಲ: ಆಟವಾಡುತ್ತಿದ್ದ ವೇಳೆ ನೀರಿನ ಸಂಪ್‌ಗೆ ಬಿದ್ದು ಎರಡೂವರೆ ವರ್ಷದ ಮಗು ಮೃತಪಟ್ಟಿರುವ ದುರ್ಘಟನೆ ಬೆಂಗಳೂರು ಉತ್ತರ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ. ಅಣ್ಣಯ್ಯ ಮತ್ತು ಋತು ದಂಪತಿಯ ಪುತ್ರ ಚಿರಾಗ್ ಮೃತ ಮಗು ಎಂದು ಗುರುತಿಸಲಾಗಿದೆ.
ಸಂಬಂಧಿಕರ ಮದುವೆಗೆ ತೆರಳಲು ದಂಪತಿ ಸಿದ್ಧತೆ ನಡೆಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಕಾರು ತೊಳೆಯಲು ಅಣ್ಣಯ್ಯ ಸಂಪಿನ ಮುಚ್ಚಳವನ್ನು ತೆರೆದು ಮನೆಯೊಳಗೆ ತೆರಳಿದ್ದರು. ಇದೇ ವೇಳೆ ಹೊರಗೆ ಆಟವಾಡುತ್ತಿದ್ದ ಚಿರಾಗ್ ಅಜಾಗರೂಕತೆಯಿಂದ ಸಂಪ್‌ಗೆ ಬಿದ್ದಿದ್ದಾನೆ ಎಂದು ತಿಳಿದುಬಂದಿದೆ.
ಸ್ವಲ್ಪ ಸಮಯದ ಬಳಿಕ ಮನೆಯವರು ಹೊರಗೆ ಬಂದು ನೋಡಿದಾಗ ಮಗು ಸಂಪ್ ಒಳಗೆ ಬಿದ್ದಿರುವುದು ಕಂಡುಬಂದಿದ್ದು, ತಕ್ಷಣ ಹೊರತೆಗೆದರೂ ಆಗಲೇ ಮಗು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

