ವಾಷಿಂಗ್ಟನ್/ತೆಹ್ರಾನ್, ಮಾರ್ಚ್ 14: ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರವಾಗಿರುವ ಖಾರ್ಗ್ ದ್ವೀಪ (Kharg Island) ಮೇಲೆ ಅಮೆರಿಕ ಭಾರೀ ವಾಯುದಾಳಿ ನಡೆಸಿರುವ ಘಟನೆ ಮಧ್ಯಪ್ರಾಚ್ಯದಲ್ಲಿ ಹೊಸ ಆತಂಕವನ್ನು ಹುಟ್ಟಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕುರಿತು ಹೇಳಿಕೆ ನೀಡಿದ್ದು, ದ್ವೀಪದಲ್ಲಿರುವ ಇರಾನ್‌ನ ಸೈನಿಕ ಗುರಿಗಳನ್ನು ನಿಖರವಾಗಿ ಗುರಿಯಾಗಿಸಿ ಅತ್ಯಂತ ಶಕ್ತಿಶಾಲಿ ಬಾಂಬ್ ದಾಳಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಅಮೆರಿಕ ಸೇನೆಯ ಈ ಕಾರ್ಯಾಚರಣೆಯಲ್ಲಿ ಖಾರ್ಗ್ ದ್ವೀಪದಲ್ಲಿದ್ದ ಸೈನಿಕ ಮೂಲಸೌಕರ್ಯಗಳಿಗೆ ಗಂಭೀರ ಹಾನಿಯಾಗಿರುವುದಾಗಿ ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಇರಾನ್‌ನ ತೈಲ ಸಂಗ್ರಹಣೆ ಮತ್ತು ರಫ್ತು ವ್ಯವಸ್ಥೆಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಪರ್ಷಿಯನ್ ಗಲ್ಪ್ ಪ್ರದೇಶದಲ್ಲಿರುವ ಖಾರ್ಗ್ ದ್ವೀಪವು ಇರಾನ್‌ನ ಅತ್ಯಂತ ಪ್ರಮುಖ ತೈಲ ರಫ್ತು ಕೇಂದ್ರವಾಗಿದ್ದು, ದೇಶದ ಬಹುಪಾಲು ಕಚ್ಚಾ ತೈಲ ರಫ್ತುಗಳು ಇಲ್ಲಿಂದಲೇ ಸಾಗುತ್ತವೆ. ಈ ಹಿನ್ನೆಲೆ ದ್ವೀಪದ ಮೇಲೆ ನಡೆದ ದಾಳಿಯ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯ ಮೇಲೂ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಇರಾನ್ ಸರ್ಕಾರ, ದೇಶದ ಭದ್ರತೆ ಹಾಗೂ ಆರ್ಥಿಕ ಹಿತಾಸಕ್ತಿಗೆ ಧಕ್ಕೆಯಾದರೆ ಕಠಿಣ ಪ್ರತಿಕ್ರಿಯೆ ನೀಡಲಾಗುತ್ತದೆ ಎಂದು ಎಚ್ಚರಿಸಿದೆ. ಈ ಘಟನೆ ಹಿನ್ನೆಲೆ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚುವ ಭೀತಿ ವ್ಯಕ್ತವಾಗಿದೆ.

