ಉಡುಪಿ: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಶ್ರೀನಿವಾಸ್ ಟಿ.ಎಂ. ಅವರಿಗೆ ಸಂಬಂಧಿಸಿದ 15 ವಿವಿಧ ಸ್ಥಳಗಳಲ್ಲಿ ಲೋಕಾಯುಕ್ತ ಮಂಗಳೂರು ವಿಭಾಗದ ಎಸ್‌ಪಿ ದಿನೇಶ್ ಕುಮಾರ್ ಅವರ ನೇತೃತ್ವದಲ್ಲಿ ಸರಣಿ ದಾಳಿ ನಡೆದಿದೆ. ಈ ಕಾರ್ಯಾಚರಣೆಯಲ್ಲಿ ಒಟ್ಟು 8 ಕೋಟಿ 69 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಲೋಕಾಯುಕ್ತ ಅಧಿಕಾರಿಗಳ ಮಾಹಿತಿ ಪ್ರಕಾರ, 6,90,64,716 ರೂ. ಮೌಲ್ಯದ ಸ್ಥಿರಾಸ್ತಿಗಳು ಪತ್ತೆಯಾಗಿದ್ದು, ಇದರಲ್ಲಿ ವಿವಿಧೆಡೆ 11 ನಿವೇಶನಗಳು, 6 ಸುಸಜ್ಜಿತ ಮನೆಗಳು ಹಾಗೂ 31 ಎಕರೆ ಕೃಷಿ ಭೂಮಿ ಸೇರಿವೆ.
ಇದಲ್ಲದೆ 2,66,90,001 ರೂ. ಮೌಲ್ಯದ ಚರಾಸ್ತಿಗಳು ಸಹ ಪತ್ತೆಯಾಗಿವೆ. ಇದರಲ್ಲಿ 3,95,941 ರೂ. ನಗದು, 1.47 ಕೋಟಿ ರೂ. ಮೌಲ್ಯದ ಚಿನ್ನದ ಆಭರಣಗಳು, ಸುಮಾರು 17 ಲಕ್ಷ ರೂ. ಮೌಲ್ಯದ ಕಾರುಗಳು, 25.75 ಲಕ್ಷ ರೂ. ಬ್ಯಾಂಕ್ ಠೇವಣಿ ಹಾಗೂ 72.68 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿ ಶ್ರೀನಿವಾಸ್ ಟಿ.ಎಂ. ಅವರು ತಮ್ಮ ತಿಳಿದ ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು. ಮಂಗಳೂರು, ಉಡುಪಿ ಸೇರಿದಂತೆ ರಾಜ್ಯದ 15 ಕಡೆಗಳಲ್ಲಿ ಎರಡು ದಿನಗಳ ಕಾಲ ಏಕಕಾಲದಲ್ಲಿ ಶೋಧ ಕಾರ್ಯ ನಡೆಯಿತು.
ಈ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಈಗಾಗಲೇ ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಿಸಿಕೊಂಡಿದ್ದು, ಮಾರ್ಚ್ 13ರಂದು ಅಧಿಕೃತವಾಗಿ ತನಿಖೆ ಆರಂಭಿಸಲಾಗಿದೆ.
ಸಾಮಾನ್ಯವಾಗಿ ಲೋಕಾಯುಕ್ತ ದಾಳಿಯಲ್ಲಿ ದೊಡ್ಡ ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾದಾಗ ಸಂಬಂಧಪಟ್ಟ ಇಲಾಖೆಯು ಅಧಿಕಾರಿಯನ್ನು ಅಮಾನತು ಮಾಡುವ ಪ್ರಕ್ರಿಯೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಶ್ರೀನಿವಾಸ್ ಟಿ.ಎಂ. ಅವರ ವಿರುದ್ಧವೂ ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ಅಮಾನತು ಆದೇಶ ಹೊರಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇದೀಗ ದಾಳಿಯಲ್ಲಿ ಪತ್ತೆಯಾದ 31 ಎಕರೆ ಕೃಷಿ ಜಮೀನು, 6 ಮನೆಗಳು ಮತ್ತು 11 ನಿವೇಶನಗಳ ದಾಖಲೆಗಳನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಈ ಆಸ್ತಿಗಳು ಅವರ ಹಾಗೂ ಕುಟುಂಬದ ಹೆಸರಿನಲ್ಲಿ ಹೇಗೆ ಬಂದವು ಎಂಬುದರ ಕುರಿತು ಶ್ರೀನಿವಾಸ್ ಅವರಿಂದ ಸ್ಪಷ್ಟನೆ ಕೇಳಲಾಗುತ್ತಿದೆ.

