ಬೆಂಗಳೂರು: ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದ ಉಂಟಾದ ಗ್ಯಾಸ್ ಕೊರತೆ ಹಿನ್ನೆಲೆಯಲ್ಲಿ ರಾಜ್ಯದ ಹೋಟೆಲ್ ಉದ್ಯಮಕ್ಕೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. ಸದ್ಯಕ್ಕೆ ಹೋಟೆಲ್‌ಗಳಿಗೆ ಎಲ್‌ಪಿಜಿ (LPG) ಗ್ಯಾಸ್ ಪೂರೈಕೆ ನೀಡಲಾಗುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ತೈಲ ಪೂರೈಕೆ ಕಂಪನಿಗಳೊಂದಿಗೆ ನಡೆದ ಮಹತ್ವದ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಗ್ಯಾಸ್ ಕೊರತೆಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಿದರು. ಈ ಕುರಿತು ಮುಖ್ಯಮಂತ್ರಿ ಕೇಂದ್ರ ಸರ್ಕಾರಕ್ಕೆ ಎರಡನೇ ಪತ್ರ ಬರೆಯುತ್ತಿದ್ದಾರೆ. ಕೇಂದ್ರ ಸರ್ಕಾರವು ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದರು.
ಇಂದು ನಡೆದ ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿ, ಆಯುಕ್ತರು ಹಾಗೂ ತೈಲ ಕಂಪನಿಗಳ ಮುಖ್ಯಸ್ಥರು ಭಾಗವಹಿಸಿದ್ದರು. ಸುಮಾರು ಒಂದು ಗಂಟೆ ಕಾಲ ನಡೆದ ಸಭೆಯಲ್ಲಿ ಗ್ಯಾಸ್ ವಿತರಣೆ ಕುರಿತು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಗ್ರಾಹಕರು ಅನಾವಶ್ಯಕ ಆತಂಕಕ್ಕೆ ಒಳಗಾಗಬಾರದು. ಗ್ಯಾಸ್ ಡಬಲ್ ಬುಕ್ಕಿಂಗ್ ಮಾಡಬಾರದು ಹಾಗೂ ಮಿತವಾಗಿ ಬಳಕೆ ಮಾಡಬೇಕು ಎಂದು ಸಚಿವರು ಮನವಿ ಮಾಡಿದರು. ಈಗಾಗಲೇ ಗ್ಯಾಸ್ ಸಾಗಣೆ ಹಡಗುಗಳ ಸಂಚಾರ ಮತ್ತೆ ಆರಂಭವಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು, ಏರ್‌ಲೈನ್ಸ್ ಹಾಗೂ ರೈಲ್ವೆ ಕ್ಯಾಂಟೀನ್‌ಗಳಿಗೆ ಶೇ.100ರಷ್ಟು ಸಿಲಿಂಡರ್ ಪೂರೈಕೆ ಮಾಡಲು ಒಪ್ಪಿಗೆ ನೀಡಲಾಗಿದೆ. ದಿನಕ್ಕೆ ಸುಮಾರು 6,500 ಸಿಲಿಂಡರ್ ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಅದರಲ್ಲಿ 4,200 ಸಿಲಿಂಡರ್‌ಗಳನ್ನು ಅತ್ಯಾವಶ್ಯಕ ಸೇವೆಗಳ ವಲಯಕ್ಕೆ ಪೂರೈಕೆ ಮಾಡಲು ತೀರ್ಮಾನಿಸಲಾಗಿದೆ.
ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ಇಂದಿರಾ ಕ್ಯಾಂಟೀನ್‌ಗಳಿಗೆ 4,200+1,200 ಸಿಲಿಂಡರ್‌ಗಳು, ಅಗತ್ಯ ಸೇವೆಗಳ ವಲಯಕ್ಕೆ 5,200 ಸಿಲಿಂಡರ್‌ಗಳು ಹಾಗೂ ಆಟೋಗಳಿಗೆ ಸುಮಾರು 2,250 ಸಿಲಿಂಡರ್‌ಗಳನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.
ಆದರೆ ಸದ್ಯಕ್ಕೆ ಹೋಟೆಲ್‌ಗಳಿಗೆ ಗ್ಯಾಸ್ ಪೂರೈಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಹೋಟೆಲ್ ಮಾಲೀಕರು ತಾತ್ಕಾಲಿಕವಾಗಿ ಎಲೆಕ್ಟ್ರಿಕ್ ಸ್ಟವ್ ಬಳಸುವಂತೆ ಸಚಿವ ಮುನಿಯಪ್ಪ ಮನವಿ ಮಾಡಿದರು.
ಸಾಮಾನ್ಯವಾಗಿ ರಾಜ್ಯದಲ್ಲಿ ಪ್ರತಿದಿನ ಸುಮಾರು 44 ಸಾವಿರ ಸಿಲಿಂಡರ್‌ಗಳನ್ನು ಹೋಟೆಲ್‌ಗಳಿಗೆ ಪೂರೈಕೆ ಮಾಡಲಾಗುತ್ತಿತ್ತು. ಈಗ ಪರಿಸ್ಥಿತಿ ಸುಧಾರಿಸುವವರೆಗೆ ದಿನಕ್ಕೆ ಸುಮಾರು 1,000 ಸಿಲಿಂಡರ್ ಮಾತ್ರ ಪೂರೈಕೆ ಮಾಡುವ ವ್ಯವಸ್ಥೆ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಅವರು ವಿವರಿಸಿದರು.

