ಬೆಂಗಳೂರು: ಧ್ರುವ ಸರ್ಜಾ ಅಭಿನಯದ, ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಕೆಡಿ: ದಿ ಡೆವಿಲ್’ ಚಿತ್ರದ ಹಾಡು ಇದೀಗ ವಿವಾದದ ಕೇಂದ್ರಬಿಂದುವಾಗಿದೆ.
ಇತ್ತೀಚೆಗೆ ಬಿಡುಗಡೆಯಾದ ಈ ಹಾಡಿನಲ್ಲಿ ನೋರಾ ಫತೇಹಿ ಹಾಗೂ ಸಂಜಯ್ ದತ್ ಕಾಣಿಸಿಕೊಂಡಿದ್ದು, ಅದ್ಧೂರಿಯಾಗಿ ರಿಲೀಸ್ ಮಾಡಲಾಗಿತ್ತು. ‘ಸರ್ಸೆ ಸೆರಗ ಸರ್ಸೆ’ ಎಂಬ ಕನ್ನಡ ಹಾಡು ಹಿಂದಿಯಲ್ಲಿ ‘ಸರ್ಕೆ ಚುನರ್’ ಸೇರಿದಂತೆ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಯೂಟ್ಯೂಬ್‌ನಲ್ಲಿ ಬಿಡುಗಡೆಗೊಂಡಿತ್ತು. ಆದರೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಹಾಡು ತೀವ್ರ ಟೀಕೆಗೆ ಗುರಿಯಾಗಿದೆ.
ಹಾಡಿನಲ್ಲಿನ ನೃತ್ಯ ಭಂಗಿಗಳು ಹಾಗೂ ಸಾಹಿತ್ಯ ‘ಅತಿರೇಕದ ಅಶ್ಲೀಲತೆ’ಯಿಂದ ಕೂಡಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿಶೇಷವಾಗಿ ಹಿಂದಿ ಆವೃತ್ತಿಯ ಸಾಹಿತ್ಯದ ವಿರುದ್ಧ ಹೆಚ್ಚು ವಿರೋಧ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಅಧಿಕೃತ ದೂರು ದಾಖಲಾಗಿದೆ.
ದೆಹಲಿಯ ವಕೀಲ ವಿನೀತ್ ಜಿಂದಾಲ್ ಅವರು ಸೆನ್ಸಾರ್ ಮಂಡಳಿಗೆ ದೂರು ನೀಡಿ, ಹಾಡನ್ನು ತಕ್ಷಣವೇ ತೆಗೆದುಹಾಕುವಂತೆ ಆಗ್ರಹಿಸಿದ್ದಾರೆ. ಜೊತೆಗೆ ದೆಹಲಿ ಸೈಬರ್ ಪೊಲೀಸರಿಗೂ ದೂರು ಸಲ್ಲಿಸಿ, ಹಾಡಿನ ರಚನೆಗೆ ಸಂಬಂಧಿಸಿದವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 294 ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ. ಮುಂಬೈನ ವರ್ಲಿ ಪೊಲೀಸ್ ಠಾಣೆಯಲ್ಲಿಯೂ ಸಹ ಈ ಕುರಿತು ದೂರು ದಾಖಲಾಗಿದೆ.
ಈ ವಿವಾದದ ಗಂಭೀರತೆಯನ್ನು ಪರಿಗಣಿಸಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ದೃಶ್ಯಗಳ ಪ್ರದರ್ಶನದ ಬಗ್ಗೆ ಆಯೋಗ ಆಕ್ಷೇಪ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.
‘ಕೆಡಿ: ದಿ ಡೆವಿಲ್’ ಚಿತ್ರದ ಈ ಐಟಂ ಹಾಡಿನಲ್ಲಿ ನೋರಾ ಫತೇಹಿ ಗ್ಲಾಮರಸ್ ನೃತ್ಯ ಪ್ರದರ್ಶಿಸಿದ್ದು, ಮದ್ಯದ ಹಿನ್ನೆಲೆಯಲ್ಲಿನ ಗೀತೆಯಾಗಿದೆ. ಆದರೆ ಹಾಡಿನಲ್ಲಿರುವ ದ್ವಂದ್ವಾರ್ಥಗಳೇ ಇದೀಗ ವಿವಾದಕ್ಕೆ ಕಾರಣವಾಗಿವೆ.

