ನವದೆಹಲಿ, ಮಾರ್ಚ್ 17: ಹಾರ್ಮುಜ್ ಜಲಸಂಧಿ ಸಂಕಷ್ಟದ ನಡುವೆಯೇ ಭಾರತಕ್ಕೆ ಎಲ್‌ಪಿಜಿ ಸರಬರಾಜು ಭಾಗಶಃ ಸುಧಾರಣೆಯಾಗುತ್ತಿರುವ ಸೂಚನೆಗಳು ಕಾಣಿಸುತ್ತಿವೆ. ಎಲ್‌ಪಿಜಿ ಗ್ಯಾಸ್ ಹೊತ್ತ ಎರಡನೇ ಹಡಗು ‘ನಂದಾದೇವಿ’ ಇಂದು ಗುಜರಾತ್‌ನ ವಡಿನಾರ್ ಬಂದರನ್ನು ತಲುಪಿದೆ.
ಸುಮಾರು 45,000 ಮೆಟ್ರಿಕ್ ಟನ್ ಎಲ್‌ಪಿಜಿ ಸಾಗಿಸಿಕೊಂಡು ಬಂದಿರುವ ಈ ಹಡಗು ಮೂಲತಃ ಕಾಂಡ್ಲಾ ಬಂದರಿಗೆ ತಲುಪಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಮಾರ್ಗ ಬದಲಿಸಿ ವಡಿನಾರ್ ಕಡೆಗೆ ತಿರುಗಿಸಲಾಯಿತು. ಇದರ ಮೊದಲು ‘ಶಿವಾಲಿಕ್’ ಹಡಗು ನಿನ್ನೆ ಮುಂದ್ರಾ ಬಂದರನ್ನು ತಲುಪಿದ್ದು, ಅದೂ ಸಮಾನ ಪ್ರಮಾಣದ ಎಲ್‌ಪಿಜಿ ಹೊತ್ತು ತಂದಿತ್ತು.
ಇನ್ನೊಂದು ಹಡಗು ‘ಜಗ್ ಲಾಡ್ಕಿ’ ಕೂಡ ಒಂದೆರಡು ದಿನಗಳಲ್ಲಿ ಮುಂದ್ರಾ ಬಂದರನ್ನು ತಲುಪುವ ನಿರೀಕ್ಷೆ ಇದೆ. ಈ ಮೂಲಕ ಹಾರ್ಮುಜ್ ಜಲಸಂಧಿ ನಿರ್ಬಂಧದ ನಡುವೆಯೂ ಭಾರತಕ್ಕೆ ಎಲ್‌ಪಿಜಿ ಪೂರೈಕೆ ಹಂತ ಹಂತವಾಗಿ ಪುನರಾರಂಭವಾಗುತ್ತಿದೆ.
ಇರಾನ್ ಯುದ್ಧದ ಪರಿಣಾಮವಾಗಿ ಹಾರ್ಮುಜ್ ಜಲಸಂಧಿಯಲ್ಲಿ ಸಾಗಣೆ ತಡೆಗಟ್ಟಲ್ಪಟ್ಟಿದ್ದು, ಭಾರತ ನಡೆಸಿದ ರಾಜತಾಂತ್ರಿಕ ಮಾತುಕತೆಯ ಬಳಿಕ ಇದುವರೆಗೆ ಮೂರು ಭಾರತೀಯ ಟ್ಯಾಂಕರ್‌ಗಳಿಗೆ ಮಾತ್ರ ಸಂಚಾರಕ್ಕೆ ಅನುಮತಿ ದೊರೆತಿದೆ.
ಈ ನಡುವೆ, ಇನ್ನೂ 22 ಭಾರತೀಯ ಹಡಗುಗಳು ಹಾರ್ಮುಜ್ ಜಲಸಂಧಿಯಲ್ಲಿ ಅನುಮತಿಗಾಗಿ ಕಾಯುತ್ತಿವೆ. ಈ ಹಡಗುಗಳಲ್ಲಿ ಒಟ್ಟು 611 ಭಾರತೀಯ ನಾವಿಕರು ಇದ್ದಾರೆ ಎಂದು ಸರ್ಕಾರದ ಮಾಹಿತಿ ತಿಳಿಸಿದೆ. ಹಡಗುಗಳನ್ನು ಸುರಕ್ಷಿತವಾಗಿ ಹೊರತರಿಸಲು ಭಾರತ ಸರ್ಕಾರ ಇರಾನ್ ಜೊತೆ ನಿರಂತರ ಸಂಪರ್ಕದಲ್ಲಿದೆ.
ಹಾರ್ಮುಜ್ ಜಲಸಂಧಿಯಲ್ಲಿನ ನಿರ್ಬಂಧದಿಂದ ಜಾಗತಿಕ ತೈಲ ಮತ್ತು ಅನಿಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದೆ. ವಿಶೇಷವಾಗಿ ಎಲ್‌ಪಿಜಿ ಪೂರೈಕೆ ಮೇಲೆ ದೊಡ್ಡ ಮಟ್ಟದ ಪರಿಣಾಮ ಬಿದ್ದಿದ್ದು, ಭಾರತದಲ್ಲಿ ಗ್ಯಾಸ್ ಬಿಕ್ಕಟ್ಟು ತೀವ್ರಗೊಂಡಿದೆ.
ಭಾರತ ಕಚ್ಚಾ ತೈಲವನ್ನು ಮುಖ್ಯವಾಗಿ ರಷ್ಯಾದಿಂದ ಖರೀದಿಸುತ್ತಿದ್ದು, ನೈಸರ್ಗಿಕ ಅನಿಲದ ಅರ್ಧವನ್ನು ದೇಶೀಯವಾಗಿ ಉತ್ಪಾದಿಸುತ್ತದೆ. ಆದರೆ ಎಲ್‌ಪಿಜಿ ಅಗತ್ಯಕ್ಕೆ ಗಲ್ಫ್ ರಾಷ್ಟ್ರಗಳ ಮೇಲೆ ಹೆಚ್ಚಿನ ಅವಲಂಬನೆ ಇರುವುದರಿಂದ, ಪ್ರಸ್ತುತ ಪರಿಸ್ಥಿತಿ ದೇಶಕ್ಕೆ ಸವಾಲಿನಾಗಿದೆ.

