ನವದೆಹಲಿ, ಮಾರ್ಚ್ 17: ಮಗುವನ್ನು ದತ್ತು ಪಡೆಯುವ ತಾಯಂದಿರ ಹಕ್ಕುಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮೂರು ತಿಂಗಳಿಗಿಂತ ಹೆಚ್ಚಿನ ವಯಸ್ಸಿನ ಮಗುವನ್ನು ದತ್ತು ಪಡೆದ ಮಹಿಳೆಯರಿಗೆ ಹೆರಿಗೆ ರಜೆ (Maternity Leave) ನಿರಾಕರಿಸುವುದು ಕಾನೂನುಬಾಹಿರ ಹಾಗೂ ತಾರತಮ್ಯಪೂರ್ಣ ಕ್ರಮ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಹಿಂದಿನ ನಿಯಮದ ಪ್ರಕಾರ, ಕೇವಲ ಮೂರು ತಿಂಗಳ ಒಳಗಿನ ಮಗುವನ್ನು ದತ್ತು ಪಡೆದ ತಾಯಂದಿರಿಗೆ ಮಾತ್ರ 12 ವಾರಗಳ ಹೆರಿಗೆ ರಜೆ ಸೌಲಭ್ಯ ನೀಡಲಾಗುತ್ತಿತ್ತು. ಆದರೆ ಈಗ ಮಗುವಿನ ವಯಸ್ಸಿನ ಮಿತಿಯನ್ನು ಲೆಕ್ಕಿಸದೆ, ದತ್ತು ಪಡೆದ ಎಲ್ಲಾ ತಾಯಂದಿರಿಗೂ ಈ ಸೌಲಭ್ಯ ಅನ್ವಯಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಮಗು ದತ್ತು ಪಡೆದ ನಂತರ ತಾಯಿ-ಮಗು ಬಾಂಧವ್ಯ ಬೆಳೆಸಲು ಸಮಯ ಅಗತ್ಯವಾಗುತ್ತದೆ. ಮಗುವಿನ ವಯಸ್ಸು ಮೂರು ತಿಂಗಳು ಮೀರಿದೆ ಎಂಬ ಕಾರಣಕ್ಕೆ ರಜೆ ನಿರಾಕರಿಸುವುದು ತಾಯಿಯ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಜೈವಿಕ ತಾಯಿ ಮತ್ತು ದತ್ತು ತಾಯಿ ನಡುವಿನ ವ್ಯತ್ಯಾಸ ಮಾಡುವುದು ಸರಿಯಲ್ಲ ಎಂದು ನ್ಯಾಯಾಲಯ ಹೇಳಿದೆ.
ಮಾತೃತ್ವ ಸೌಲಭ್ಯ ಕಾಯ್ದೆ (Maternity Benefit Act) ಸೆಕ್ಷನ್ 5(4) ಅಡಿಯಲ್ಲಿ ಇರುವ ನಿರ್ಬಂಧಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಪಂಕಜ್ ಮಿತ್ತಲ್ ಈ ಮಹತ್ವದ ಆದೇಶವನ್ನು ಹೊರಡಿಸಿದರು.

