ಬೆಂಗಳೂರು, ಮಾ.22: ನಗರದ ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಐಷಾರಾಮಿ ಲಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಸಂಚಾರ ಠಾಣೆ ಪೊಲೀಸರು ಕ್ರಮ ಕೈಗೊಂಡಿದ್ದು, ಆರೋಪಿತ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣದಲ್ಲಿ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಡ್ರಿಫ್ಟಿಂಗ್ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಜೊತೆಗೆ ಕಾರಿನ ಮಾಲೀಕತ್ವದ ದಾಖಲೆಗಳ ಪರಿಶೀಲನೆಗಾಗಿ ಆರ್‌ಟಿಒಗೆ ಪೊಲೀಸರು ಪತ್ರ ಬರೆದಿದ್ದಾರೆ.
ಕೆಎ05 NR 0009 ನೋಂದಣಿ ಸಂಖ್ಯೆಯ ಲಾಂಬೋರ್ಗಿನಿ ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿರುವ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
ಅನಿಲ್ ಕುಂಬ್ಳೆ ಸರ್ಕಲ್ ಪ್ರದೇಶದಲ್ಲಿ ಒಂದೇ ದಿನದಲ್ಲಿ ಎರಡು-ಮೂರು ಬಾರಿ ಕಾರು ಡ್ರಿಫ್ಟಿಂಗ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಸಾರ್ವಜನಿಕ ರಸ್ತೆ ಮತ್ತು ಫ್ಲೈಓವರ್ ಕೆಳಗೆ ವಾಹನ ಸಂಚಾರ ನಡೆಯುತ್ತಿರುವ ನಡುವೆಯೇ ‘ಡೋನಟ್’ ಸ್ಟಂಟ್‌ಗಳನ್ನು ಮಾಡಿರುವುದು ಸ್ಪಷ್ಟವಾಗಿ ಕಾಣಿಸಿದೆ.
ಜಾಗೃತ ನಾಗರಿಕರೊಬ್ಬರು ಈ ವಿಡಿಯೋವನ್ನು ಎಕ್ಸ್ (ಟ್ವಿಟರ್) ಮೂಲಕ ಬೆಂಗಳೂರು ಪೊಲೀಸರ ಗಮನಕ್ಕೆ ತಂದಿದ್ದಾರೆ.
ಈ ಘಟನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ರಸ್ತೆಗಳು ರೇಸ್ ಟ್ರ್ಯಾಕ್‌ಗಳಲ್ಲ” ಎಂದು ಕಿಡಿಕಾರಿದ್ದಾರೆ. ಚಾಲಕನ ಲೈಸೆನ್ಸ್ ರದ್ದುಪಡಿಸಿ ಕಠಿಣ ದಂಡ ವಿಧಿಸಬೇಕೆಂದು ಒತ್ತಾಯ ಕೇಳಿಬಂದಿದೆ. ಕೆಲವರು “ಇದು ಶ್ರೀಮಂತರ ಆಟ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

