ಇಸ್ರೇಲ್: ದಕ್ಷಿಣ ಇಸ್ರೇಲ್ನಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಳಗೊಂಡಿದೆ. ಶನಿವಾರ ಸಂಜೆ ಡಿಮೋನಾ ಪಟ್ಟಣದ ಮೇಲೆ ಇರಾನ್ನ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆದಿದ್ದು, ಕನಿಷ್ಠ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಡಿಮೋನಾ ಪಟ್ಟಣವು ಇಸ್ರೇಲ್‌ನ ಪ್ರಮುಖ ಪರಮಾಣು ಸಂಶೋಧನಾ ಕೇಂದ್ರಕ್ಕೆ ಹೆಸರುವಾಸಿಯಾಗಿದ್ದು, 1958ರಲ್ಲಿ ಸ್ಥಾಪಿಸಲಾದ ಈ ತಾಣ ದೇಶದ ಅಣು ಸಂಶೋಧನೆಗೆ ಪ್ರಮುಖ ಕೇಂದ್ರವಾಗಿದೆ. ಗುಮ್ಮಟಾಕಾರದ ರಚನೆಯಿಂದ ಪ್ರಸಿದ್ಧಿ ಪಡೆದಿರುವ ಈ ಪ್ರದೇಶವನ್ನು “ಲಿಟಲ್ ಇಂಡಿಯಾ” ಎಂದೂ ಕರೆಯಲಾಗುತ್ತದೆ.
ಈ ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ-ಯಹೂದಿಗಳು ವಾಸವಾಗಿದ್ದು, ಸುಮಾರು 7,500 ಮಂದಿ ಮಹಾರಾಷ್ಟ್ರ ಮೂಲದವರಿದ್ದಾರೆ. ಡಿಮೋನಾ ಭಾರತ ಜತೆ ಗಾಢ ಸಾಂಸ್ಕೃತಿಕ ನಂಟು ಹೊಂದಿದೆ ಎಂಬುದು ವಿಶೇಷ.
ಶನಿವಾರ ಸಂಜೆ ವಸತಿ ಪ್ರದೇಶದ ಮೇಲೆ ಕ್ಷಿಪಣಿ ಅಪ್ಪಳಿಸಿದ ಪರಿಣಾಮ ಸುಮಾರು 47 ಮಂದಿ ಗಾಯಗೊಂಡಿದ್ದಾರೆ. ತಕ್ಷಣವೇ ಸ್ಪಂದಿಸಿದ ತುರ್ತು ವೈದ್ಯಕೀಯ ತಂಡಗಳು ಗಾಯಾಳುಗಳಿಗೆ ಚಿಕಿತ್ಸೆ ನೀಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರಲ್ಲಿ 10 ಮತ್ತು 12 ವರ್ಷದ ಇಬ್ಬರು ಬಾಲಕರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಇನ್ನೂ 30 ವರ್ಷದ ಮಹಿಳೆಯೊಬ್ಬರು ಸೇರಿದಂತೆ ಹಲವರು ಸಣ್ಣಪುಟ್ಟ ಗಾಯಗಳಿಗೆ ಒಳಗಾಗಿದ್ದಾರೆ. ದಾಳಿಯ ಸಮಯದಲ್ಲಿ ಓಡುವಾಗ ಬಿದ್ದು ಗಾಯಗೊಂಡವರ ಸಂಖ್ಯೆಯೂ ಹೆಚ್ಚಾಗಿದೆ ಎಂದು ರಕ್ಷಣಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ವಸತಿ ಪ್ರದೇಶದ ಮೇಲೆ ದಾಳಿ ನಡೆದಿದ್ದರೂ ಹೆಚ್ಚಿನವರು ಮನೆಯೊಳಗಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಗಾಯಗೊಂಡ ಮಕ್ಕಳಲ್ಲಿ ಒಬ್ಬರು ದಾಳಿಯ ಸಮಯದಲ್ಲಿ ಹೊರಗಿದ್ದರಿಂದ ಗಂಭೀರ ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ದಾಳಿಯಲ್ಲಿ ಪರಮಾಣು ಸಂಶೋಧನಾ ಕೇಂದ್ರಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಸ್ಪಷ್ಟಪಡಿಸಿದೆ. ಪರಿಸ್ಥಿತಿಯನ್ನು ನಿಗಾದಲ್ಲಿಟ್ಟುಕೊಂಡಿದ್ದು, ಮಿಲಿಟರಿ ಸಂಯಮ ಪಾಲಿಸಬೇಕೆಂದು ಕರೆ ನೀಡಿದೆ.
ಈ ಘಟನೆ ಕುರಿತು ಇಸ್ರೇಲ್ ರಕ್ಷಣಾ ಪಡೆಗಳು ತನಿಖೆ ಆರಂಭಿಸುವುದಾಗಿ ತಿಳಿಸಿವೆ. ಕ್ಷಿಪಣಿಯನ್ನು ತಡೆಹಿಡಿಯುವಲ್ಲಿ ವಿಫಲವಾದ ಹಿನ್ನೆಲೆ ಪರಿಶೀಲನೆ ನಡೆಯಲಿದೆ.
ಇದೇ ವೇಳೆ, ನಟಾಂಜ್ನ ಪರಮಾಣು ಸೌಲಭ್ಯ ಮೇಲೆ ನಡೆದ ದಾಳಿಗೆ ತಾವು ಸಂಬಂಧಪಟ್ಟಿಲ್ಲ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ. ಈ ಕುರಿತು ಐಎಇಎ ಮುಖ್ಯಸ್ಥ ರಾಫೆಲ್ ಮರಿಯಾನೋ ಗ್ರೋಸಿ ತನಿಖೆ ನಡೆಯಲಿದೆ ಎಂದು ಹೇಳಿದ್ದಾರೆ.
ಒಟ್ಟಾರೆ, ಮಧ್ಯಪ್ರಾಚ್ಯದ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಜಾಗತಿಕ ಮಟ್ಟದಲ್ಲಿ ಆತಂಕ ಹೆಚ್ಚಿಸಿದೆ.

