ಬೆಂಗಳೂರು, ಮಾ. 23: ಕಳೆದ 12 ದಿನಗಳಿಂದ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯದ ಹೋಟೆಲ್ ಉದ್ಯಮಕ್ಕೆ ಕೊನೆಗೂ ನಿರಾಳತೆ ಸಿಕ್ಕಿದೆ. ಇಂದಿನಿಂದ ಹೋಟೆಲ್‌ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಅನಿಲ ಪೂರೈಕೆ ಮಾಡುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಕೇಂದ್ರ ಪೆಟ್ರೋಲಿಯಂ ಇಲಾಖೆಯ ಸೂಚನೆಯಂತೆ, ಯುದ್ಧಪೂರ್ವದಲ್ಲಿದ್ದ ಸ್ಥಿತಿಗೆ ಮರಳುವಂತೆ ಸಿಲಿಂಡರ್ ಪೂರೈಕೆಯನ್ನು ಶೇ.50ರಷ್ಟು ಹೆಚ್ಚಿಸಲು ತೀರ್ಮಾನಿಸಲಾಗಿದೆ. ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘವು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿತ್ತು. ಹೈಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಿದ್ದ ಹಿನ್ನೆಲೆಯಲ್ಲೇ ಈ ನಿರ್ಧಾರ ಹೊರಬಿದ್ದಿದೆ.
ಉದ್ಯಮಕ್ಕೆ ಹೊಡೆತ, ಇದೀಗ ಚೇತರಿಕೆ ನಿರೀಕ್ಷೆ
ಗಲ್ಫ್ ಪ್ರದೇಶದಲ್ಲಿ ನಡೆದ ಯುದ್ಧದ ಪರಿಣಾಮವಾಗಿ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಹೋಟೆಲ್ ಉದ್ಯಮ ಕುಸಿತಕ್ಕೊಳಗಾಗಿತ್ತು. ಅನಿಲ ಲಭ್ಯವಿಲ್ಲದ ಕಾರಣ ಅನೇಕ ಹೋಟೆಲ್‌ಗಳು ತಾತ್ಕಾಲಿಕವಾಗಿ ಬಾಗಿಲು ಮುಚ್ಚಿದ್ದವು. ಕೆಲ ಹೋಟೆಲ್‌ಗಳು ತಮ್ಮ ಮೆನು ಬದಲಾಯಿಸಿ ಸಾಂಪ್ರದಾಯಿಕ ಸೌದೆ ಒಲೆಗಳನ್ನು ಬಳಸುವ ಪರಿಸ್ಥಿತಿ ಎದುರಿಸಬೇಕಾಯಿತು.
ವಾಣಿಜ್ಯ ಸಿಲಿಂಡರ್‌ಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಬಳಸುವ ಉದ್ಯಮಿಗಳಿಗೆ ಹೆಚ್ಚುವರಿ ಪೂರೈಕೆ ಮತ್ತು ವಿಶೇಷ ಆಫರ್‌ಗಳನ್ನು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಈ ಹಿಂದೆ ವಾಣಿಜ್ಯ ಸಿಲಿಂಡರ್ ಪೂರೈಕೆಯನ್ನು ಶೇ.30ರಷ್ಟು ಕಡಿತಗೊಳಿಸಲಾಗಿದ್ದರಿಂದ ಬೆಂಗಳೂರು ಸೇರಿದಂತೆ ಕಲಬುರಗಿ ಸೇರಿದಂತೆ ರಾಜ್ಯದ ಹಲವೆಡೆ ಹೋಟೆಲ್ ಮಾಲೀಕರು ಹಾಗೂ ಗ್ರಾಹಕರು ತೊಂದರೆ ಅನುಭವಿಸಿದ್ದರು. ಇದೀಗ ಕೇಂದ್ರದ ಹೊಸ ಆದೇಶದಿಂದ ಹೋಟೆಲ್ ಉದ್ಯಮ ಮತ್ತೆ ಚೇತರಿಸಿಕೊಳ್ಳುವ ವಿಶ್ವಾಸ ವ್ಯಕ್ತವಾಗಿದೆ.

