ಬೆಂಗಳೂರು, ಮಾ. 25: ಹತ್ತೊಂಭತ್ತನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ, ಕರ್ನಾಟಕದ ಹೆಮ್ಮೆಯ ಕರ್ನಾಟಕ ಮಿಲ್ಕ್ ಫೆಡರೇಷನ್ (ಕೆಎಂಎಫ್) ತನ್ನ ನಂದಿನಿ ಬ್ರ್ಯಾಂಡ್ ಮೂಲಕ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದೊಂದಿಗೆ ಸಹಭಾಗಿತ್ವ ಘೋಷಿಸಿದೆ.
ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ, “ನಂದಿನಿ ಬ್ರ್ಯಾಂಡ್ ಸದಾ ಕ್ರೀಡೆ ಹಾಗೂ ಯುವಜನತೆಯನ್ನು ಪ್ರೋತ್ಸಾಹಿಸುವ ಧ್ಯೇಯ ಹೊಂದಿದೆ. ರಾಜ್ಯದ ಹೆಮ್ಮೆಯ ಎರಡು ಪ್ರತಿಷ್ಠಿತ ಬ್ರ್ಯಾಂಡ್‌ಗಳಾದ ನಂದಿನಿ ಮತ್ತು ಆರ್‌ಸಿಬಿ ಒಂದಾಗಿರುವುದು ನಮಗೆ ಅಪಾರ ಸಂತೋಷ ತಂದಿದೆ. ಅಭಿಮಾನಿಗಳೊಂದಿಗೆ ಮತ್ತಷ್ಟು ಸಂಪರ್ಕ ಬೆಳೆಸಿ, ಲೀಗ್‌ನ ಉತ್ಸಾಹವನ್ನು ಸಂಭ್ರಮಿಸಲು ನಾವು ಎದುರು ನೋಡುತ್ತಿದ್ದೇವೆ,” ಎಂದು ಹೇಳಿದರು.
ಇನ್ನೂ ಅವರು, “ಆರ್‌ಸಿಬಿಯೊಂದಿಗಿನ ಈ ಸಹಭಾಗಿತ್ವವು ಕ್ರೀಡೆಯನ್ನು ಬೆಂಬಲಿಸುವ ನಂದಿನಿಯ ಪರಂಪರೆಯನ್ನು ಮತ್ತಷ್ಟು ಬಲಪಡಿಸಲಿದೆ. ಜೊತೆಗೆ ರಾಜ್ಯದ ಕ್ರೀಡಾ ಉತ್ಸಾಹಕ್ಕೆ ಹೊಸ ಚೈತನ್ಯ ನೀಡಲಿದೆ. ಈ ಭಾಗವಾಗಿ ನಂದಿನಿ ಬ್ರ್ಯಾಂಡ್ ವಿವಿಧ ಜಾಹೀರಾತು ಚಟುವಟಿಕೆಗಳು ಹಾಗೂ ವಿಶೇಷ ಕಾರ್ಯಕ್ರಮಗಳ ಅಭಿಯಾನಗಳನ್ನು ಕೈಗೊಳ್ಳಲಿದೆ,” ಎಂದು ತಿಳಿಸಿದರು.
ಆರ್‌ಸಿಬಿ ಸಿಇಒ ರಾಜೇಶ್ ಮೆನನ್ ಪ್ರತಿಕ್ರಿಯಿಸಿ, “ಕರುನಾಡ ಮಣ್ಣಿನೊಂದಿಗೆ ಗಾಢ ಬಾಂಧವ್ಯ ಹೊಂದಿರುವ ಎರಡು ಬ್ರ್ಯಾಂಡ್‌ಗಳು ಒಂದಾಗಿರುವುದು ವಿಶೇಷ. ನಂದಿನಿಯ ವಿಶ್ವಾಸಾರ್ಹತೆ ಮತ್ತು ಮನೆಮಾತಾದ ಸ್ಥಾನಮಾನ ಈ ಸಹಭಾಗಿತ್ವವನ್ನು ಮತ್ತಷ್ಟು ಅರ್ಥಪೂರ್ಣವಾಗಿಸುತ್ತದೆ. ಈ ಸೀಸನ್‌ನಲ್ಲಿ ಅಭಿಮಾನಿಗಳಿಗೆ ವಿಶೇಷ ಅನುಭವಗಳನ್ನು ನೀಡಲು ನಾವು ಕಾತರರಾಗಿದ್ದೇವೆ,” ಎಂದು ಹೇಳಿದರು.

