ಧಾರವಾಡ, ಮಾ.25: ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ (53) ಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಇದು ಪೂರ್ವನಿಯೋಜಿತ ಕೊಲೆ ಎಂಬುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ಧಾರವಾಡ ತಾಲೂಕಿನ ರಾಮಾಪುರ ಗ್ರಾಮದ ರೈಲ್ವೆ ಟ್ರ್ಯಾಕ್ ಸಮೀಪದ ದಟ್ಟ ಅರಣ್ಯ ಪ್ರದೇಶದಲ್ಲಿ ಕಾರಿನೊಳಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ರಾಜು ಬೋಳಶೆಟ್ಟಿ ಅವರ ಶವ ಪತ್ತೆಯಾಗಿತ್ತು. ಈ ಘಟನೆ ಜಿಲ್ಲೆಯಾದ್ಯಂತ ಭಾರಿ ಸಂಚಲನ ಮೂಡಿಸಿತ್ತು.
ಪ್ರಾಥಮಿಕ ತನಿಖೆಯಲ್ಲಿ, ಮಹಿಳೆಯೊಂದಿಗಿನ ಅನೈತಿಕ ಸಂಬಂಧವೇ ಕೊಲೆಗೆ ಕಾರಣವಾಗಿರುವುದು ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ಮಾಜಿ ಶಾಸಕರೊಬ್ಬರ ಪುತ್ರನಾಗಿರುವ ರಾಜು ಬೋಳಶೆಟ್ಟಿ, ಆ ಮಹಿಳೆಯೊಂದಿಗೆ ಆಪ್ತ ಸಂಪರ್ಕ ಹೊಂದಿದ್ದು, ದೈಹಿಕ ಸಂಬಂಧಕ್ಕಾಗಿ ಲಕ್ಷಾಂತರ ರೂಪಾಯಿ ಹಣ ನೀಡಿದ್ದರೆಂದು ತಿಳಿದುಬಂದಿದೆ. ಇದೇ ವಿಚಾರವಾಗಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ.
ಘಟನೆಯ ದಿನವೂ ರಾಜು ಬೋಳಶೆಟ್ಟಿ ಮಹಿಳೆಯನ್ನು ಹೊಲಕ್ಕೆ ಕರೆದುಕೊಂಡು ಹೋಗಿದ್ದ ವೇಳೆ, ಮಹಿಳೆ, ಆಕೆಯ ಮಗ ಹಾಗೂ ಆಕೆಯ ಪ್ರಿಯಕರ ಸೇರಿ ಕೊಲೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೊಲೆ ನಂತರ ಆರೋಪಿಗಳು ರಾಜು ಬೋಳಶೆಟ್ಟಿ ಅವರದೇ ಕಾರಿನಲ್ಲಿ ಶವವನ್ನು ರಾಮಾಪುರ ಅರಣ್ಯ ಪ್ರದೇಶಕ್ಕೆ ಸಾಗಿಸಿ, ಕಾರಿನ ಹಿಂಭಾಗದ ಸೀಟಿನಲ್ಲಿ ಇಟ್ಟು ಸುಮಾರು 10 ಲೀಟರ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.
ಘಟನೆ ಬಳಿಕ ಪರಾರಿಯಾಗಿದ್ದ ಮೂವರನ್ನೂ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಚುರುಕಿನ ಕಾರ್ಯಾಚರಣೆಯ ಮೂಲಕ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

