ಬೆಂಗಳೂರು, ಮಾ. 25: ಕರ್ನಾಟಕ ಬಜೆಟ್ 2026 ಮಂಡನೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಹುಕಾಲ ನೋಡಿ ಸಮಯ ನಿಗದಿ ಮಾಡಿದ್ದಾರೆ ಎಂಬ ಪ್ರತಿಪಕ್ಷಗಳ ಟೀಕೆ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.
ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುವ ವೇಳೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಈ ವಿಷಯವನ್ನು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಅಧಿಕಾರಿಗಳು ಹಾಗೂ ಮನೆಯವರ ಸಲಹೆ ಮೇರೆಗೆ ರಾಹುಕಾಲ ನೋಡಿದ್ದು ಸತ್ಯ ಎಂದು ಒಪ್ಪಿಕೊಂಡರು.
ಆದರೆ ವೈಯಕ್ತಿಕವಾಗಿ ರಾಹುಕಾಲ, ಗುಳಿಕಕಾಲ ಅಥವಾ ಇತರೆ ಗ್ರಹಣ ಕಾಲಗಳ ಮೇಲೆ ಯಾವುದೇ ನಂಬಿಕೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಈ ಹಿಂದೆ ಹಲವು ಬಾರಿ ರಾಹುಕಾಲದಲ್ಲೇ ಬಜೆಟ್ ಮಂಡಿಸಿರುವ ಉದಾಹರಣೆಗಳನ್ನೂ ಅವರು ನೀಡಿದರು.
ಇದಲ್ಲದೆ, ‘ಯುಗಾದಿ ದಿನ ಅಥವಾ ಶಿವರಾತ್ರಿ ದಿನ ಮಾಂಸಾಹಾರ ಸೇವನೆ ಮಾಡುತ್ತಾರಾ? ನಾನು ತಿನ್ನುತ್ತೇನೆ, ಅದು ನನ್ನ ವೈಯಕ್ತಿಕ ಆಯ್ಕೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಹೇಳಿಕೆಗೆ ಸದನದಲ್ಲಿ ಕೆಲಕಾಲ ಚರ್ಚೆ, ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

