ಮಂಡ್ಯ: ನಗರಸಭೆಯ ಪೌರಕಾರ್ಮಿಕರಾದ ಮಹೇಶ್ ಮತ್ತು ಸುಬ್ಬಲಕ್ಷ್ಮಮ್ಮ ಅವರು ಸ್ವಚ್ಛತಾ ಕಾರ್ಯದ ವೇಳೆ ಪತ್ತೆಯಾದ ಚಿನ್ನದ ಉಂಗುರವನ್ನು ಅದರ ಮಾಲೀಕರಿಗೆ ಹಿಂತಿರುಗಿಸಿ ಪ್ರಾಮಾಣಿಕತೆಗೆ ಮಾದರಿಯಾಗಿದ್ದಾರೆ.
ವಕೀಲ ಆರ್. ಮಹೇಶ್ ಕೃಷ್ಣ ಅವರು ಎಂದಿನಂತೆ ಬೆಳಗ್ಗೆ ಕುವೆಂಪು ನಗರದ ಬಲಮುರಿ ದೇವಾಲಯದ ಬಳಿ ವಾಯುವಿಹಾರಕ್ಕೆ ತೆರಳಿದ ವೇಳೆ 8.5 ಗ್ರಾಂ ತೂಕದ ಚಿನ್ನದ ಉಂಗುರವನ್ನು ಕಳೆದುಕೊಂಡಿದ್ದರು. ಬಹಳಷ್ಟು ಹುಡುಕಾಡಿದರೂ ಉಂಗುರ ಸಿಕ್ಕಿರಲಿಲ್ಲ.
ನಂತರ ದೇವಾಲಯದ ಸಮೀಪದ ಅಂಗಡಿಯಲ್ಲಿ ವಿಚಾರಿಸಿದಾಗ, ಪೌರಕಾರ್ಮಿಕರಿಗೆ ಉಂಗುರ ಸಿಕ್ಕಿರುವ ಮಾಹಿತಿ ತಿಳಿದುಬಂದಿದೆ. ಬೆಳಿಗ್ಗೆ 11 ಗಂಟೆಗೆ ನಗರಸಭೆ ಕಚೇರಿಯಲ್ಲಿ ಮಹೇಶ್ ಮತ್ತು ಸುಬ್ಬಲಕ್ಷ್ಮಮ್ಮ ಅವರು ಉಂಗುರವನ್ನು ಮಾಲೀಕರಾದ ಮಹೇಶ್ ಕೃಷ್ಣ ಅವರಿಗೆ ಹಿಂತಿರುಗಿಸಿದರು.
ಸುಮಾರು 1.35 ಲಕ್ಷ ರೂಪಾಯಿ ಮೌಲ್ಯದ ಉಂಗುರವನ್ನು ಪ್ರಾಮಾಣಿಕವಾಗಿ ವಾಪಸ್ ನೀಡಿದ ಈಿಬ್ಬರ ನಡೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

