ನವದೆಹಲಿ, ಮಾರ್ಚ್ 27: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ದೇಶದಲ್ಲಿ ಇಂಧನ ಬೆಲೆ ಏರಿಕೆಯ ಆತಂಕ ಹೆಚ್ಚುತ್ತಿರುವ ನಡುವೆ, ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಲೀಟರ್‌ಗೆ ₹10ರವರೆಗೆ ಇಳಿಸಲಾಗಿದೆ.
ಗುರುವಾರ ತಡರಾತ್ರಿ ಪ್ರಕಟವಾದ ಗೆಜೆಟ್ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಲೀಟರ್‌ಗೆ ₹13ರಿಂದ ₹3ಕ್ಕೆ ಇಳಿಸಲಾಗಿದ್ದು, ಡೀಸೆಲ್ ಮೇಲಿನ ಸುಂಕವನ್ನು ₹10ರಿಂದ ಸಂಪೂರ್ಣವಾಗಿ ಶೂನ್ಯಕ್ಕೆ ತಗ್ಗಿಸಲಾಗಿದೆ.
ಇರಾನ್ ಮತ್ತು ಯುಎಸ್-ಇಸ್ರೇಲ್ ನಡುವಿನ ಸಂಘರ್ಷದಿಂದ ಉಂಟಾದ ಜಾಗತಿಕ ತೈಲ ಬಿಕ್ಕಟ್ಟು, ವಿಶೇಷವಾಗಿ ಹಾರ್ಮುಜ್ ಜಲಸಂಧಿ ಮುಚ್ಚಿರುವ ಪರಿಣಾಮ ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಈ ಅಬಕಾರಿ ಸುಂಕ ಕಡಿತದಿಂದ ಕಚ್ಚಾ ತೈಲದ ಬೆಲೆ ಏರಿಕೆಯಿಂದ ಒತ್ತಡ ಅನುಭವಿಸುತ್ತಿದ್ದ ತೈಲ ಕಂಪನಿಗಳಿಗೆ ಸ್ವಲ್ಪ ಮಟ್ಟಿನ ನೆರವು ಸಿಗುವ ನಿರೀಕ್ಷೆ ಇದೆ. ಜೊತೆಗೆ, ಇಂಧನ ಬೆಲೆಗಳನ್ನು ನಿಯಂತ್ರಣದಲ್ಲಿ ಇಟ್ಟು ಗ್ರಾಹಕರಿಗೆ ಸಹಾಯ ಮಾಡುವ ಉದ್ದೇಶವೂ ಸರ್ಕಾರದ ಕ್ರಮದ ಹಿಂದೆ ಇದೆ. ಆದರೆ, ಸದ್ಯಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಬೆಲೆಯಲ್ಲಿ ಯಾವುದೇ ತಕ್ಷಣದ ಬದಲಾವಣೆ ಕಂಡುಬಂದಿಲ್ಲ.
ಇದರ ನಡುವೆಯೇ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ಪೂರೈಕೆ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಭರವಸೆ ನೀಡಿದೆ. ಯಾವುದೇ ಕೊರತೆ ಇಲ್ಲದೆ ಪೂರೈಕೆ ಸರಪಳಿ ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸ್ಪಷ್ಟಪಡಿಸಿದೆ.
ದೇಶದ ಎಲ್ಲಾ ಪೆಟ್ರೋಲ್ ಪಂಪ್‌ಗಳಲ್ಲಿ ಸಾಕಷ್ಟು ಇಂಧನ ಸಂಗ್ರಹವಿದ್ದು, ಸಂಸ್ಕರಣಾಗಾರಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ದೇಶೀಯ ಎಲ್‌ಪಿಜಿ ಉತ್ಪಾದನೆಯನ್ನು ಕೂಡ ಹೆಚ್ಚಿಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

