ಬೆಂಗಳೂರು: ನಗರದಿಂದ ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ತೆರಳುತ್ತಿದ್ದ ಒಂದೇ ಕುಟುಂಬದ ಮೂವರು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂಗಾರುಪಾಳ್ಯಂ ಸಮೀಪದ ಪಲಮಕುಲಪಲ್ಲಿ ಬಳಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬೆಂಗಳೂರು ಮೂಲದ ದಂಪತಿ ಹಾಗೂ ಅವರ ನಾಲ್ಕು ವರ್ಷದ ಹೆಣ್ಣು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಚಾಲಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪಲಮನೇರ್‌ನಿಂದ ಚಿತ್ತೂರಿಗೆ ಸಾಗುತ್ತಿದ್ದ ಬಸ್ ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ, ಹಿಂಬದಿಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರಿನಲ್ಲಿದ್ದ ದಂಪತಿ ಹಾಗೂ ಮಗು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತದ ತೀವ್ರತೆಗೆ ಮೃತದೇಹಗಳು ಕಾರಿನಲ್ಲೇ ಸಿಲುಕಿಕೊಂಡಿದ್ದವು.
ಅಪಘಾತದ ನಂತರ ಪೊಲೀಸರು ಹಾಗೂ ರಕ್ಷಣೆ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಜೆಸಿಬಿ ಯಂತ್ರದ ಸಹಾಯದಿಂದ ಬಸ್‌ನ ಹಿಂಭಾಗಕ್ಕೆ ಸಿಲುಕಿಕೊಂಡಿದ್ದ ಕಾರನ್ನು ಹೊರತೆಗೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಚಾಲಕನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ ಅತಿವೇಗವೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತ ಕುಟುಂಬವು ಇಂದು ಮಧ್ಯಾಹ್ನ 12 ಗಂಟೆಗೆ ತಿರುಪತಿ ದರ್ಶನಕ್ಕಾಗಿ ಟಿಕೆಟ್ ಪಡೆದುಕೊಂಡಿದ್ದು, ದೇವರ ದರ್ಶನಕ್ಕಿಂತ ಮುನ್ನವೇ ದುರಂತ ಸಂಭವಿಸಿರುವುದು ಮನಕಲುಕುವಂತಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತರ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

