ಬೆಂಗಳೂರು, ಮಾರ್ಚ್ 29: ಮಂಗಳೂರಿನಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ನ್ಯಾಯಾಂಗ ಬಂಧನದಲ್ಲಿದ್ದ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಕ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಅವನ ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯ ಅಂಗೀಕರಿಸಿದೆ.
ಶಿವಮೊಗ್ಗ ಮೂಲದ 27 ವರ್ಷದ ಶಾರೀಕ್, 2022ರ ನವೆಂಬರ್ 19ರಂದು ಆಟೋರಿಕ್ಷಾದಲ್ಲಿ ಸಾಗಿಸುತ್ತಿದ್ದ ಪ್ರೆಶರ್ ಕುಕ್ಕರ್ ಬಾಂಬ್ ಅವನ ಮಡಿಲಲ್ಲೇ ಸ್ಫೋಟಗೊಂಡ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ. ಟೈಮರ್ ದೋಷದಿಂದ ಸಂಭವಿಸಿದ್ದ ಈ ಸ್ಫೋಟದಲ್ಲಿ ಆಟೋ ಚಾಲಕನೂ ತೀವ್ರವಾಗಿ ಗಾಯಗೊಂಡಿದ್ದ. ಬಳಿಕ ಚಿಕಿತ್ಸೆ ಪಡೆದ ಶಾರೀಕ್‌ನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು.
2024ರ ಏಪ್ರಿಲ್ 20ರಂದು ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ತಾನು ನಿರಪರಾಧಿ ಎಂದು ಹೇಳಿದ್ದ ಶಾರೀಕ್, ನಂತರ ತನ್ನ ನಿಲುವು ಬದಲಿಸಿದ್ದಾನೆ. 2025ರ ಡಿಸೆಂಬರ್‌ನಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 229 ಅಡಿಯಲ್ಲಿ ತಪ್ಪೊಪ್ಪಿಗೆ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿಯನ್ನು ಕಳೆದ ಮಾರ್ಚ್ 26ರಂದು ನ್ಯಾಯಾಲಯ ಅಂಗೀಕರಿಸಿದೆ.
ತಪ್ಪೊಪ್ಪಿಗೆ ಅರ್ಜಿಯಲ್ಲಿ ಶಾರೀಕ್, “ಕುಕ್ಕರ್‌ನಲ್ಲಿ ಐಇಡಿ ಇಟ್ಟು ಸ್ಫೋಟ ಮಾಡಿದ್ದೇನೆ. ನನಗೆ ಪಶ್ಚಾತ್ತಾಪವಾಗಿದೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ” ಎಂದು ಹೇಳಿದ್ದಾನೆ. ಮೂರು ತಿಂಗಳ ವಿಚಾರಣೆ ಬಳಿಕ ನ್ಯಾಯಾಲಯವು ಈ ಅರ್ಜಿಯನ್ನು ಮಾನ್ಯಗೊಳಿಸಿದೆ.
ಎನ್‌ಐಎ ತನಿಖೆಯ ಪ್ರಕಾರ, ಶಾರೀಕ್ ಐಸಿಸ್ ಪ್ರೇರಿತ ಶಿವಮೊಗ್ಗ ಮಾಡ್ಯೂಲ್ ಸದಸ್ಯನಾಗಿದ್ದು, 2020ರಿಂದ ಹಲವು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ. 2022ರ ಸೆಪ್ಟೆಂಬರ್‌ನಲ್ಲಿ ಶಿವಮೊಗ್ಗದಲ್ಲಿ ನಡೆದ ಐಇಡಿ ಪರೀಕ್ಷಾ ಪ್ರಕರಣದಲ್ಲೂ ಅವನ ಕೈವಾಡವಿದೆ. ಇದಕ್ಕೂ ಮೊದಲು 2020ರಲ್ಲಿ ಮಂಗಳೂರಿನಲ್ಲಿ ನಡೆದ ರಾಷ್ಟ್ರವಿರೋಧಿ ಗೋಡೆ ಬರಹ ಪ್ರಕರಣದಲ್ಲೂ ಬಂಧನಕ್ಕೊಳಗಾಗಿದ್ದನು.
ಇದೇ ವೇಳೆ 2024ರ ಮಾರ್ಚ್ 1ರಂದು ಬೆಂಗಳೂರಿನ ರಾಮೇಶ್ವರಂ ಕಫೆ ಬಾಂಬ್ ಸ್ಫೋಟ ಪ್ರಕರಣದಲ್ಲೂ ಶಾರೀಕ್ ಕೈವಾಡವಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ ಸದ್ಯಕ್ಕೆ ಕುಕ್ಕರ್ ಸ್ಫೋಟ ಪ್ರಕರಣದಲ್ಲಷ್ಟೇ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

