ಬೆಂಗಳೂರು: ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹನ್ನೊಂದು ತಿಂಗಳ ಬಳಿಕ ಮತ್ತೆ ಕ್ರಿಕೆಟ್ ಹಬ್ಬ ಕಳೆಗಟ್ಟಿತು. ಮೈದಾನದೆಲ್ಲೆಡೆ ಕೆಂಪು ಸಾಗರವೇ ಹರಿದುಬಂದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಜೈಕಾರ ಹಾಕಿ ಸಂಭ್ರಮಿಸಿದರು. ಡಿಜೆ ಸಂಗೀತದ ಜೊತೆಗೆ ದಿವಂಗತ ಪುನೀತ್ ರಾಜಕುಮಾರ್ ಅವರ ನೆನಪಿನ ಹಾಡುಗಳು ಕ್ರೀಡಾಂಗಣದಲ್ಲಿ ಮೊಳಗಿದವು.
19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಗೆಲುವಿನ ಅಭಿಯಾನ ಆರಂಭಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು. ಇಶಾನ್ ಕಿಶನ್ ಕೇವಲ 38 ಎಸೆತಗಳಲ್ಲಿ 80 ರನ್ ಸಿಡಿಸಿ ಆರ್‌ಸಿಬಿ ಬೌಲರ್‌ಗಳಿಗೆ ಸವಾಲೊಡ್ಡಿದರು. ಹೆನ್ರಿಚ್ ಕ್ಲಾಸೆನ್ ಜೊತೆಗೂಡಿ 97 ರನ್‌ಗಳ ಜೊತೆಯಾಟ ಕಟ್ಟಿದರು. ಅಂತಿಮ ಹಂತದಲ್ಲಿ ಅಂಕಿತ್ ವರ್ಮಾ ಅವರ ಸ್ಪೋಟಕ ಆಟ ತಂಡದ ಮೊತ್ತವನ್ನು 200 ದಾಟಿಸಿತು.
ಆರ್‌ಸಿಬಿ ಪರ ಪದಾರ್ಪಣೆ ಮಾಡಿದ ಕಿವೀಸ್ ವೇಗಿ ಜೇಕಬ್ ಡಫಿ ತಮ್ಮ ಚೊಚ್ಚಲ ಪಂದ್ಯದಲ್ಲೇ ಮಿಂಚಿದರು. ಕೇವಲ 22 ರನ್ ನೀಡಿ 3 ಪ್ರಮುಖ ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು.
ಪಂದ್ಯದ ಹೈಲೈಟ್ ಆಗಿದ್ದು ಫಿಲ್ ಸಾಲ್ಟ್ ಹಿಡಿದ ಅದ್ಭುತ ಕ್ಯಾಚ್. ಪಾಯಿಂಟ್‌ನಲ್ಲಿ ಗಾಳಿಯಲ್ಲಿ ಹಾರಿ ಒಂದೇ ಕೈಯಲ್ಲಿ ಹಿಡಿದ ಆ ಕ್ಯಾಚ್ ಇಡೀ ಕ್ರೀಡಾಂಗಣವನ್ನು ಬೆರಗುಗೊಳಿಸಿತು.
202 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಆರ್‌ಸಿಬಿಗೆ ಆರಂಭಿಕ ಆಘಾತ ಎದುರಾದರೂ, ದೇವದತ್ತ ಪಡಿಕ್ಕಲ್ (61) ಹಾಗೂ ವಿರಾಟ್ ಕೊಹ್ಲಿ (ಅಜೇಯ 69) ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ತಂಡಕ್ಕೆ ಭದ್ರ ನೆಲೆ ನೀಡಿದರು. ಇವರಿಬ್ಬರ 101 ರನ್‌ಗಳ ಜೊತೆಯಾಟ ಪಂದ್ಯದ ಗತಿಯನ್ನು ಬದಲಿಸಿತು. ನಾಯಕ ರಜತ್ ಪಾಟೀದಾರ್ ವೇಗದ 31 ರನ್‌ಗಳ ಕೊಡುಗೆ ನೀಡಿದರು. ಕೊನೆಗೆ ಕೊಹ್ಲಿ–ಟಿಮ್ ಡೇವಿಡ್ ಜೊತೆಯಾಟದ ನೆರವಿನಿಂದ ಆರ್‌ಸಿಬಿ 15.4 ಓವರ್‌ಗಳಲ್ಲಿ 203 ರನ್ ಗಳಿಸಿ ಗೆಲುವು ಸಾಧಿಸಿತು.
ಕಳೆದ ವರ್ಷದ ದುರಂತದಲ್ಲಿ ಮೃತಪಟ್ಟ 11 ಅಭಿಮಾನಿಗಳ ಸ್ಮರಣಾರ್ಥ ಪಿ ಒನ್ ಗ್ಯಾಲರಿಯಲ್ಲಿ 11 ಆಸನಗಳನ್ನು ಖಾಲಿ ಬಿಟ್ಟು ಪುಷ್ಪನಮನ ಸಲ್ಲಿಸಲಾಯಿತು. ಪಂದ್ಯಕ್ಕೂ ಮುನ್ನ ಒಂದು ನಿಮಿಷ ಮೌನಾಚರಣೆ ಕೂಡ ನಡೆಸಲಾಯಿತು.
ಖ್ಯಾತ ಗಾಯಕ ವಿಜಯ ಪ್ರಕಾಶ್ ಅವರ ರಾಷ್ಟ್ರಗೀತೆಯೊಂದಿಗೆ ಪಂದ್ಯ ಆರಂಭವಾಯಿತು. ಭದ್ರತೆಗಾಗಿ 2000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಜಯ್ ಶಾ ಸೇರಿದಂತೆ ಹಲವಾರು ಗಣ್ಯರು ಪಂದ್ಯ ವೀಕ್ಷಿಸಿದರು.

