ನವದೆಹಲಿ, ಏಪ್ರಿಲ್ 1: ಕ್ರೈಸ್ತ ಧರ್ಮೀಯರ ಆರಾಧ್ಯ ವ್ಯಕ್ತಿಯಾದ ಯೇಸು ಕ್ರಿಸ್ತನ ಕುರಿತು ಹೊಸ ವೈಜ್ಞಾನಿಕ ಸಂಶೋಧನೆ ಮತ್ತೆ ಚರ್ಚೆಗೆ ಕಾರಣವಾಗಿದೆ. ಟುರಿನ್ ಶ್ರೌಡ್ ಎಂದು ಕರೆಯಲಾಗುವ, ಯೇಸು ಕ್ರಿಸ್ತನ ಅಂತ್ಯಕ್ರಿಯೆ ವೇಳೆ ಬಳಸಲಾಗಿದೆ ಎಂದು ನಂಬಲಾಗುವ ಬಟ್ಟೆಯ ಕುರಿತು ನಡೆದ ಡಿಎನ್‌ಎ ವಿಶ್ಲೇಷಣೆ ಅಚ್ಚರಿಯ ಮಾಹಿತಿಯನ್ನು ಬಹಿರಂಗಪಡಿಸಿದೆ.
ಇತ್ತೀಚಿನ ಅಧ್ಯಯನದಲ್ಲಿ, ಈ ಬಟ್ಟೆಯ ಮೇಲಿನ ಧೂಳು ಮತ್ತು ಪರಾಗ ಕಣಗಳನ್ನು ಪರೀಕ್ಷಿಸಿದಾಗ ಭಾರತ ಸೇರಿದಂತೆ ವಿವಿಧ ದೇಶಗಳ ಸಸ್ಯಗಳ ಡಿಎನ್‌ಎ ಗುರುತುಗಳು ಪತ್ತೆಯಾಗಿವೆ. ವಿಜ್ಞಾನಿಗಳ ಪ್ರಕಾರ, ಈ ಬಟ್ಟೆಯನ್ನು ತಯಾರಿಸಲು ಬಳಸಿದ ನೂಲು ಭಾರತ ಮೂಲದ್ದಾಗಿರಬಹುದು ಅಥವಾ ಬಟ್ಟೆಯ ನೇಯ್ಗೆ ಭಾರತದಲ್ಲಿ ನಡೆದಿರಬಹುದು. ಇನ್ನೊಂದು ಸಾಧ್ಯತೆ ಎಂದರೆ, ಈ ಬಟ್ಟೆ ಭಾರತದಿಂದ ಮಧ್ಯಪ್ರಾಚ್ಯಕ್ಕೆ ಸಾಗಿರಬಹುದು.
ಇಟಲಿಯ ಪಡುವಾ ವಿಶ್ವವಿದ್ಯಾಲಯದ ಸಂಶೋಧಕರು ಜೀನ್ ಸೀಕ್ವೆನ್ಸಿಂಗ್ ತಂತ್ರಜ್ಞಾನ ಬಳಸಿ ಈ ಅಧ್ಯಯನ ನಡೆಸಿದ್ದಾರೆ. ಪರೀಕ್ಷೆಯಲ್ಲಿ ಚೀನಾ, ಮಧ್ಯಪ್ರಾಚ್ಯ ಮತ್ತು ಯುರೋಪ್ ಪ್ರದೇಶಗಳಿಗೆ ಸೇರಿದ ಸಸ್ಯಗಳ ಡಿಎನ್‌ಎ ಗುರುತುಗಳೂ ಪತ್ತೆಯಾಗಿದ್ದು, ಈ ಬಟ್ಟೆ ಜಗತ್ತಿನ ವಿವಿಧ ಭಾಗಗಳಲ್ಲಿ ಸಂಚರಿಸಿದೆ ಎಂಬುದನ್ನು ಸೂಚಿಸುತ್ತದೆ.
ಸುಮಾರು 4.4 ಮೀಟರ್ ಉದ್ದ ಮತ್ತು 1.1 ಮೀಟರ್ ಅಗಲ ಹೊಂದಿರುವ ಈ ಲಿನಿನ್ ಬಟ್ಟೆ ಇಟಲಿಯ ಟುರಿನ್ ನಗರದ ಸೇಂಟ್ ಜಾನ್ ದಿ ಬ್ಯಾಪ್ಟಿಸ್ಟ್ ಕೆಥೆಡ್ರಲ್‌ನಲ್ಲಿ ಸಂರಕ್ಷಿಸಲಾಗಿದೆ. ಇದರ ಮೇಲೆ ಶಿಲುಬೆಗೇರಿಸಲ್ಪಟ್ಟ ವ್ಯಕ್ತಿಯ ಮಬ್ಬಾದ ಆಕೃತಿ ಕಾಣುತ್ತದೆ. ಕ್ರೈಸ್ತ ಭಕ್ತರ ನಂಬಿಕೆಯ ಪ್ರಕಾರ, ಇದು ಯೇಸು ಕ್ರಿಸ್ತನ ಅಂತ್ಯಕ್ರಿಯೆಯಲ್ಲಿ ಬಳಸಿದ ಶ್ರೌಡ್ ಆಗಿದೆ.
ಈ ಕುರಿತು ಈಗಾಗಲೇ ಹಲವು ಸಂಶೋಧನೆಗಳು ನಡೆದಿದ್ದು, 2015ರಲ್ಲಿ ಇಟಲಿಯ ಪಡುವಾ ವಿಶ್ವವಿದ್ಯಾಲಯದ ವಿಜ್ಞಾನಿ ಗಿಯಾನಿ ಬಾರ್ಕಾಸಿಯಾ ಅವರು ಈ ಬಟ್ಟೆಗೆ ಭಾರತ ಮೂಲ ಇರಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇತ್ತೀಚಿನ ಅಧ್ಯಯನವು ಆ ಹೇಳಿಕೆಗೆ ಮತ್ತಷ್ಟು ಬಲ ನೀಡಿದೆ.

