ಬೆಳಗಾವಿ: ಆಟೋ ಚಾಲಕರ ಬದುಕಿಗೆ ಗ್ಯಾಸ್ ದರ ಏರಿಕೆ ದೊಡ್ಡ ಹೊಡೆತ ನೀಡಿದ್ದು, ಜಿಲ್ಲಾಡಳಿತದ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತ್ತಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕುಂದಾನಗರಿ ಬೆಳಗಾವಿಯ ಆಟೋ ರಿಕ್ಷಾ ಚಾಲಕರ ಸ್ಥಿತಿ ಈಗ ಹಾಲಾಹಲ ಕುಡಿದಂತಾಗಿದೆ.
ಒಂದೆಡೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಪರಿಣಾಮದಿಂದಲೇ ಸಂಕಷ್ಟದಲ್ಲಿದ್ದ ಚಾಲಕರಿಗೆ, ಈಗ ಎಂಜಿ (MG) ಮತ್ತು ಆಟೋ ಎಲ್ಪಿಜಿ (Auto LPG) ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಜಿಲ್ಲಾಡಳಿತದ ಸೂಚನೆಗಳನ್ನು ಲೆಕ್ಕಿಸದೆ ಕೆಲ ಗ್ಯಾಸ್ ಸ್ಟೇಷನ್ ಮಾಲೀಕರು ಕೃತಕ ಅಭಾವ ಸೃಷ್ಟಿಸಿ ದಿಢೀರ್ ಬೆಲೆ ಏರಿಕೆ ಮಾಡಿರುವುದಾಗಿ ಆರೋಪ ಕೇಳಿಬಂದಿದೆ. ಇದರ ವಿರುದ್ಧ ಸಾರ್ವಜನಿಕರು ಹಾಗೂ ಆಟೋ ಚಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ ಮಾತ್ರ ಜಿಲ್ಲಾಡಳಿತವು “ಜಿಲ್ಲೆಯಲ್ಲಿ ಸಾಕಷ್ಟು ಗ್ಯಾಸ್ ದಾಸ್ತಾನು ಇದೆ” ಎಂದು ಪ್ರಕಟಣೆ ನೀಡಿದ್ದರೂ, ನೆಲದ ವಾಸ್ತವಿಕತೆ ಬೇರೆಯೇ ಚಿತ್ರ ತೋರಿಸುತ್ತಿದೆ. ಗ್ಯಾಸ್ ತುಂಬಿಸಿಕೊಳ್ಳಲು ಸ್ಟೇಷನ್‌ಗಳಿಗೆ ಹೋದಾಗ “ಸ್ಟಾಕ್ ಇಲ್ಲ” ಎಂಬ ಉತ್ತರ ಸಿಗುತ್ತಿದ್ದು, ಕೆಲವೇ ಗಂಟೆಗಳಲ್ಲಿ ಬೆಲೆ ಏರಿಕೆಯಾದ ಬಳಿಕ ಗ್ಯಾಸ್ ಲಭ್ಯವಾಗುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.
ಇದು ಉದ್ದೇಶಪೂರ್ವಕ ಲೂಟಿ ಎಂದು ಆರೋಪಿಸಿರುವ ಆಟೋ ಚಾಲಕರು, ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
“ಮೊದಲೇ ಬಾಡಿಗೆ ಇಲ್ಲದೆ ದಿನ ತಳ್ಳುವುದು ಕಷ್ಟವಾಗಿದೆ. ಈಗ ಗ್ಯಾಸ್ ದರ ಏರಿಕೆ ಮತ್ತು ಕೃತಕ ಅಭಾವದಿಂದ ನಾವು ಬದುಕುವುದೇ ಕಷ್ಟವಾಗಿದೆ,” ಎಂದು ಚಾಲಕರು ತಮ್ಮ ಅಳಲು ವ್ಯಕ್ತಪಡಿಸಿದ್ದಾರೆ. ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಎಲ್ಲೆಡೆಯಿಂದ ಕೇಳಿಬರುತ್ತಿದೆ.

