ಬೆಳಗಾವಿ: ಎನ್‌ಎಚ್-4 ಬೆಂಗಳೂರು–ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾಂಗು, ಮಚ್ಚುಗಳ ದರ್ಬಾರ್ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯ ನಿಪ್ಪಾಣಿ ತಾಲೂಕಿನ ಸ್ಥವನಿಧಿ ಘಾಟ್ ಪ್ರದೇಶದಲ್ಲಿ ಪಂಜಾಬ್ ಮೂಲದ ಕೆಲ ವ್ಯಕ್ತಿಗಳು ಮಾರಕಾಸ್ತ್ರಗಳ ಮಾರಾಟ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ರಸ್ತೆ ಬದಿಯಲ್ಲಿ ಬಚ್ಚಿಟ್ಟಿರುವ ಲಾಂಗು, ಮಚ್ಚುಗಳನ್ನು ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ತೋರಿಸಿ ಮಾರಾಟ ಮಾಡಲು ಯತ್ನಿಸುತ್ತಿರುವ ದೃಶ್ಯಗಳು ಗಮನಕ್ಕೆ ಬಂದಿವೆ.
ಇದೇ ವೇಳೆ, ಜಿಲ್ಲೆಯಲ್ಲಿ ನಡೆಯುತ್ತಿರುವ ಹಲವು ಕೊಲೆ ಪ್ರಕರಣಗಳಲ್ಲಿ ಇಂತಹ ಮಾರಕಾಸ್ತ್ರಗಳೇ ಬಳಕೆಯಾಗುತ್ತಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಇನ್ನೂ ಗಂಭೀರ ಆರೋಪವೆಂದರೆ, ಪೊಲೀಸ್ ಇಲಾಖೆಯ ಕೆಲ ಸಿಬ್ಬಂದಿ ಈ ಆರೋಪಿಗಳಿಂದ ಮಾಸಿಕ ಹಣ ಪಡೆಯುತ್ತಿದ್ದಾರೆ ಎಂದು ಆ ವ್ಯಕ್ತಿಯೇ ಬಹಿರಂಗಪಡಿಸಿದ್ದಾನೆ ಎನ್ನಲಾಗಿದೆ. ಇದರಿಂದ ಕಾನೂನು ಸುವ್ಯವಸ್ಥೆಯ ಮೇಲೆ ಪ್ರಶ್ನೆಗಳು ಎದ್ದಿವೆ.
ಇಂತಹ ಭಯಾನಕ ಮಾರಕಾಸ್ತ್ರಗಳ ಮಾರಾಟಕ್ಕೆ ಅವಕಾಶ ನೀಡುವ ಮೂಲಕ ರಾಜ್ಯವನ್ನು ಅಪರಾಧಗಳ ಗೂಡಾಗಿಸಲು ಕೆಲವರು ಸಹಕರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ನಿಪ್ಪಾಣಿ ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.
ಈ ಘಟನೆ ಕುರಿತು ಮೇಲಧಿಕಾರಿಗಳು ತಕ್ಷಣ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

