ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯ ಹಿನ್ನೆಲೆ ಮಲಪ್ಪುರಂನಲ್ಲಿ ಪ್ರಚಾರಕ್ಕೆ ತೆರಳಿದ್ದ ವೇಳೆ ಕಾಂಗ್ರೆಸ್ ಸಂಸದ Shashi Tharoor ಅವರ ಕಾರನ್ನು ತಡೆದು ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.
ಸಂಜೆ ಸುಮಾರು 7 ಗಂಟೆ ವೇಳೆಗೆ ಮಲಪ್ಪುರಂ ಜಿಲ್ಲೆಯ ವಂಡೂರಿನ ಚೆಲ್ಲಿತೋಡೆಯಲ್ಲಿ ಈ ಘಟನೆ ನಡೆದಿದೆ. ಈ ವೇಳೆ ತರೂರ್ ಅವರ ಭದ್ರತೆಗೆ ನಿಯೋಜಿಸಲಾದ ಗನ್‌ಮ್ಯಾನ್ ಮಧ್ಯಪ್ರವೇಶಿಸಿದಾಗ, ಅವರ ಮೇಲೂ ದಾಳಿಕೋರರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
Shashi Tharoor ಅವರು ಕಾಂಗ್ರೆಸ್ ಅಭ್ಯರ್ಥಿ AP Anil Kumar ಪರ ಪ್ರಚಾರಕ್ಕಾಗಿ ವಂಡೂರಿಗೆ ಆಗಮಿಸಿದ್ದರು. ಇದೇ ವೇಳೆ ಬೈಕ್‌ಗಳಲ್ಲಿ ಬಂದ ಗುಂಪೊಂದು ಬೆಂಗಾವಲು ವಾಹನವನ್ನು ತಡೆದು ಗೊಂದಲ ಸೃಷ್ಟಿಸಿ, ಹಲ್ಲೆಗೆ ಯತ್ನಿಸಿದೆ.
ಈ ಸಂಬಂಧ ಗನ್‌ಮ್ಯಾನ್ ಸ್ವತಃ ದೂರು ದಾಖಲಿಸಿದ್ದು, ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ತರೂರ್ ಅವರ ಕಾರನ್ನು ತಡೆದ ವ್ಯಕ್ತಿ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಜೊತೆಗೆ, ದಾಳಿಕೋರರು ಬಳಸಿದ ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಕಾರು ತಡೆದ ಪ್ರಮುಖ ಆರೋಪಿಯನ್ನು ಕಾಳಿಕಾವು ನಿವಾಸಿ ಉಮರ್ ಎಂದು ಗುರುತಿಸಲಾಗಿದೆ. ಒಟ್ಟು ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಶಂಕಿತರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ. ಇನ್ನುಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಈ ದಾಳಿಯ ಹಿಂದೆ ರಾಜಕೀಯ ವೈಮನಸ್ಸು ಅಥವಾ ಪಿತೂರಿ ಇದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ದಾಳಿಕೋರರು ಉದ್ದೇಶಪೂರ್ವಕವಾಗಿ ಅಶಾಂತಿ ಸೃಷ್ಟಿಸಲು ಯತ್ನಿಸಿದಂತೆ ಕಾಣುತ್ತಿದೆ ಎಂದು ಪೊಲೀಸರು ಶಂಕಿಸಿದ್ದು, ತನಿಖೆ ಮುಂದುವರಿದಿದೆ.

