ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವವು ಅದ್ದೂರಿಯಾಗಿ ಜರುಗಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ Defence Research and Development Organisation (DRDO) ಮಹಾನಿರ್ದೇಶಕ ಡಾ. ಬಿನಯ್ ಕುಮಾರ್ ದಾಸ್ ಭಾಗವಹಿಸಿದರು.
ಈ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಅರ್ಜುನ ಜನ್ಯ, ಮಾಜಿ ಕ್ರಿಕೆಟರ್ ವೆಂಕಟೇಶ ಪ್ರಸಾದ್ ಸೇರಿದಂತೆ ಒಟ್ಟು 6 ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನಿಸಲಾಯಿತು. ಶಿಕ್ಷಣ ತಜ್ಞ ಹಾಗೂ ಮಾಜಿ ಡಿಸಿಎಂ ಅಶ್ವಥ್ ನಾರಾಯಣ ಅವರ ತಂದೆ ಟಿ.ಕೆ. ನಾರಾಯಣಪ್ಪ, ಎಂಎಲ್ಸಿ ಡಾ. ಕೆ. ಗೋವಿಂದ್ ರಾಜ್, ಶಿಕ್ಷಣ ಕ್ಷೇತ್ರದ ಮೋಹನ್ ಆಳ್ವಾ ಹಾಗೂ ಕೈಗಾರಿಕೋದ್ಯಮಿ, ಮಾಜಿ ಎಂಎಲ್ಸಿ ಬಾವಾ ಮೊಹಮ್ಮದ್ ಫಾರೂಕ್ ಅವರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದರು.
ಉಪಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಘಟಿಕೋತ್ಸವಕ್ಕೆ ಗೈರಾಗಿದ್ದರು. ಒಟ್ಟು 37,370 ವಿದ್ಯಾರ್ಥಿಗಳಿಗೆ ಪದವಿ ಹಾಗೂ 23 ಮಂದಿಗೆ ಪಿಹೆಚ್‌ಡಿ ಪದವಿ ಪ್ರದಾನಿಸಲಾಯಿತು. ಇದೇ ವೇಳೆ 73 ಮಂದಿಗೆ ಪ್ರಥಮ ರ‍್ಯಾಂಕ್, ಚಿನ್ನದ ಪದಕ ಮತ್ತು ನಗದು ಬಹುಮಾನ ವಿತರಿಸಲಾಯಿತು.
ಎಂ.ಎಸ್‌ಸಿ ರಸಾಯನಶಾಸ್ತ್ರ ವಿಭಾಗದ ಸ್ನೇಹಾ ಟಿ. ಅತ್ಯಧಿಕ 4 ಚಿನ್ನದ ಪದಕಗಳನ್ನು ಪಡೆದು ಗಮನಸೆಳೆದರು. ಅಭಿಷೇಕ್ ಶ್ರೀರಾಮ್ ಮತ್ತು ದಿವ್ಯಶ್ರೀ ಎಸ್ ತಲಾ 3 ಚಿನ್ನದ ಪದಕಗಳನ್ನು ಪಡೆದು ವಿಶೇಷ ಸಾಧನೆ ಮೆರೆದರು.

