ನವದೆಹಲಿ, ಏಪ್ರಿಲ್ 4: ಇರಾನ್ ಮೇಲೆ ನಡೆದ ಯುಎಸ್–ಇಸ್ರೇಲ್ ದಾಳಿಗಳ ಬಳಿಕ ಪ್ರದೇಶದಲ್ಲಿ ಉದ್ವಿಗ್ನತೆ ತಾರಕಕ್ಕೇರಿದ್ದರೂ, ಭಾರತವು ಹಾರ್ಮುಜ್ ಜಲಸಂಧಿಯ ಮೂಲಕ ತನ್ನ ಸಮುದ್ರ ಸಂಚಾರವನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡಿದೆ.
ಫೆಬ್ರವರಿ 28ರಿಂದ ಆರಂಭವಾದ ಯುದ್ಧ ಪರಿಸ್ಥಿತಿಯ ನಡುವೆಯೇ ಭಾರತಕ್ಕೆ ಸೇರಿದ ಒಟ್ಟು 8 ಹಡಗುಗಳು ಈ ಪ್ರಮುಖ ಜಲಮಾರ್ಗವನ್ನು ಸುರಕ್ಷಿತವಾಗಿ ದಾಟಿವೆ. ಇತರೆ ದೇಶಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಹಡಗುಗಳು ಈ ಮಾರ್ಗವನ್ನು ಬಳಸಿರುವುದು ಗಮನಾರ್ಹವಾಗಿದೆ.
ಜಾಗತಿಕ ತೈಲ ಮತ್ತು ಅನಿಲ ಸಾಗಣೆಯ ಸುಮಾರು 20% ನಡೆಯುವ ಪ್ರಮುಖ ಚಾಕ್‌ಪಾಯಿಂಟ್ ಆಗಿರುವ ಹಾರ್ಮುಜ್ ಜಲಸಂಧಿಯಲ್ಲಿ ದಾಳಿಗಳ ನಂತರ ಇರಾನ್ ನಿರ್ಬಂಧ ಹೇರಿದರೂ, ಭಾರತ ಸೇರಿದಂತೆ ಕೆಲವು ಮಿತ್ರ ರಾಷ್ಟ್ರಗಳಿಗೆ ಮಾರ್ಗವನ್ನು ಮುಕ್ತವಾಗಿರಿಸಲಾಯಿತು.
ಇತ್ತೀಚೆಗೆ ಎಲ್‌ಪಿಜಿ ಟ್ಯಾಂಕರ್ ‘ಗ್ರೀನ್ ಸಾನ್ವಿ’ ಯಶಸ್ವಿಯಾಗಿ ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತತ್ತ ಪ್ರಯಾಣಿಸುತ್ತಿದ್ದು, ಇದು ಈ ಮಾರ್ಗದಲ್ಲಿ ಸಂಚರಿಸಿದ 8ನೇ ಹಡಗು ಎನಿಸಿದೆ.
ಈಗಾಗಲೇ ಶಿವಾಲಿಕ್, ನಂದಾ ದೇವಿ, ಜಗ್ ಲಾಡ್ಕಿ, ಪೈನ್ ಗ್ಯಾಸ್, ಜಗ್ ವಸಂತ, BW ಟೈರ್, BW ಎಲ್ಮ್ ಸೇರಿದಂತೆ ಹಲವು ಹಡಗುಗಳು ಸುರಕ್ಷಿತವಾಗಿ ಈ ಮಾರ್ಗವನ್ನು ದಾಟಿವೆ.
ಇದನ್ನೊಳಗೊಂಡಂತೆ, ಸುಮಾರು 485 ಭಾರತೀಯ ನಾವಿಕರನ್ನು ಹೊತ್ತ 15ಕ್ಕೂ ಹೆಚ್ಚು ಹಡಗುಗಳು ಇನ್ನೂ ಗಲ್ಫ್ ಪ್ರದೇಶದಲ್ಲೇ ಉಳಿದಿವೆ. ಯುದ್ಧ ಪರಿಸ್ಥಿತಿ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಬಲಪಡಿಸಲಾಗಿದೆ.
ಭಾರತೀಯ ಹಾಗೂ ಇತರ ರಾಷ್ಟ್ರಗಳ ಹಡಗುಗಳ ಸುರಕ್ಷತೆಗಾಗಿ ಭಾರತೀಯ ನೌಕಾಪಡೆಯು ಓಮನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರ ಪ್ರದೇಶಗಳಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

