ಅಥಣಿ: ಸಾಮಾನ್ಯವಾಗಿ ಬರಗಾಲದಲ್ಲಿ ನೀರಿನ ಕೊರತೆ ಎದುರಾಗುವುದು ಸಹಜ. ಆದರೆ ಇಲ್ಲಿ ವಿಚಿತ್ರವಾದ ಅಚ್ಚರಿಯ ಘಟನೆ ನಡೆಯುತ್ತಿದ್ದು, ವರ್ಷಪೂರ್ತಿ ಬತ್ತಿರುವ ಬೋರವೆಲ್ ಜಾತ್ರೆ ದಿನಗಳಲ್ಲಿ ಮಾತ್ರ ನೀರು ಒದಗಿಸಿ, ಉತ್ಸವ ಮುಗಿದ ತಕ್ಷಣ ಮತ್ತೆ ಬತ್ತಿಹೋಗುತ್ತದೆ. ಈ ವಿಶೇಷ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕಂಡುಬರುತ್ತಿದೆ.
ಶಿವಯೋಗಿಗಳ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಈ ಪ್ರದೇಶದಲ್ಲಿ ಪವಾಡಗಳ ಕಥೆಗಳು ಅಪಾರ. ಕೆಲ ಭಾಗಗಳು ಕೃಷ್ಣ ನದಿಯ ಸಮೀಪ ಹಸಿರಿನಿಂದ ಕಂಗೊಳಿಸಿದರೂ, ಇನ್ನೂ ಕೆಲವು ಪ್ರದೇಶಗಳು ನೀರಿನ ಸಮಸ್ಯೆಯಿಂದ ಬಳಲುತ್ತಿವೆ. ಆದರೆ ವರ್ಷವಿಡೀ ನೀರಿಲ್ಲದ ಈ ಬೋರವೆಲ್ ಜಾತ್ರೆ ಸಮಯದಲ್ಲಿ ಮಾತ್ರ ಜೀವಂತವಾಗುತ್ತದೆ ಎಂಬುದು ವಿಶೇಷ.
ದೇವಾಲಯದ ಪಕ್ಕದಲ್ಲಿ ಹಲವು ವರ್ಷಗಳ ಹಿಂದೆ ಕೊರೆಸಲಾಗಿದ್ದ ಈ ಬೋರವೆಲ್ ಸಾಮಾನ್ಯ ದಿನಗಳಲ್ಲಿ ಸಂಪೂರ್ಣ ಬತ್ತಿರುತ್ತದೆ. ಆದರೆ ಬಿರು ಬೇಸಿಗೆಯಲ್ಲಿ ನಡೆಯುವ ಜಾತ್ರೆಯ ವೇಳೆ ಲಕ್ಷಾಂತರ ಭಕ್ತರು ಹಾಗೂ ಜಾನುವಾರುಗಳಿಗೆ ಸಾಕಷ್ಟು ನೀರು ಪೂರೈಸುತ್ತದೆ. ಉತ್ಸವ ಮುಗಿದ ಬಳಿಕ ಎಷ್ಟೇ ಪ್ರಯತ್ನಿಸಿದರೂ ನೀರು ಸಿಗುವುದಿಲ್ಲವೆಂಬುದು ಸ್ಥಳೀಯರ ಹೇಳಿಕೆ.
ಸ್ಥಳೀಯರ ಪ್ರಕಾರ, ಇದು ಶ್ರೀ ಮುರುಘೇಂದ್ರ ಶಿವಯೋಗಿಗಳ ಪವಾಡ ಎಂದು ನಂಬಲಾಗುತ್ತಿದೆ. ಜಾತ್ರೆಯ ಮೊದಲು ಹಾಗೂ ನಂತರ ನೀರು ತೆಗೆಯಲು ಹಲವು ಬಾರಿ ಪ್ರಯತ್ನಿಸಿದರೂ ವಿಫಲವಾಗಿರುವುದಾಗಿ ಅವರು ಹೇಳುತ್ತಾರೆ. ಜಾತ್ರೆ ಸಂದರ್ಭದಲ್ಲಿ ಮಾತ್ರ ನೀರು ಲಭ್ಯವಾಗುವುದು, ಸ್ಥಳೀಯರ ನಂಬಿಕೆಗೆ ಮತ್ತಷ್ಟು ಬಲ ನೀಡಿದೆ.
ವರದಿ: ಸೂರಜ್ ಕೋರೆ, ಚಿಕ್ಕೋಡಿ ವರದಿಗಾರರು

