ಕೋಲ್ಕತ್ತಾ, ಏಪ್ರಿಲ್ 9: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ತಾಪಮಾನ ಏರಿಕೆಯಾಗಿದ್ದು, ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ಮೇಲೆ ಆರೋಪ ಹೊರಿಸಿರುವ ಮೋದಿ, ರಾಜ್ಯದಲ್ಲಿ ಹಣದ ದುರುಪಯೋಗ ಮತ್ತು ಲೂಟಿ ನಡೆಯುತ್ತಿದೆ ಎಂದು ಟೀಕಿಸಿದರು.
ಹಲ್ದಿಯಾದಲ್ಲಿ ನಡೆದ ಭರ್ಜರಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ಬಂಗಾಳದ ಸಮಗ್ರ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡಬೇಕು. ಪ್ರಧಾನಿಯನ್ನು ವಿರೋಧಿಸುವುದರಿಂದ ರಾಜ್ಯಕ್ಕೆ ಯಾವುದೇ ಲಾಭವಾಗುವುದಿಲ್ಲ” ಎಂದು ಹೇಳಿದರು.
ರಾಜ್ಯದಲ್ಲಿ “ಡಬಲ್ ಎಂಜಿನ್ ಸರ್ಕಾರ”ದ ಅಗತ್ಯವಿದೆ ಎಂದು ಒತ್ತಿ ಹೇಳಿದ ಮೋದಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಮತ್ತು ಪ್ರಧಾನಿಯವರು ಕೈಜೋಡಿಸಿದಾಗ ಮಾತ್ರ ಜನರಿಗೆ ನೇರ ಪ್ರಯೋಜನ ಸಿಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ, ಬಂಗಾಳವನ್ನು ಮೀನುಗಾರಿಕೆ ಹಾಗೂ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ ರಾಜ್ಯವನ್ನಾಗಿ ಮಾಡುವ ಭರವಸೆ ನೀಡಿದ ಪ್ರಧಾನಿ, ಜನತೆಗೆ ಆರು ಪ್ರಮುಖ ಭರವಸೆಗಳನ್ನು ಘೋಷಿಸಿದರು.
ಅದರಲ್ಲೂ ಪ್ರಮುಖವಾಗಿ, ರಾಜ್ಯದಲ್ಲಿ ನಿರ್ಮಾಣವಾಗಿರುವ “ಭಯದ ವಾತಾವರಣ”ವನ್ನು ಅಂತ್ಯಗೊಳಿಸುವುದಾಗಿ ಅವರು ಹೇಳಿದರು. ತೃಣಮೂಲ ಕಾಂಗ್ರೆಸ್ ಆಡಳಿತದಲ್ಲಿ ಜನರಲ್ಲಿ ಭದ್ರತೆ ಕೊರತೆ ಉಂಟಾಗಿದೆ ಎಂದು ಆರೋಪಿಸಿದ ಮೋದಿ, ಬಿಜೆಪಿ ಸರ್ಕಾರ ಬಂದರೆ ನಂಬಿಕೆ ಮತ್ತು ಭದ್ರತೆಯ ವಾತಾವರಣವನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಚುನಾವಣಾ ಹೊಸ್ತಿಲಲ್ಲಿ ನಡೆದ ಈ ಭಾಷಣದಿಂದ ಪಶ್ಚಿಮ ಬಂಗಾಳ ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗಳು ಶುರುವಾಗಿದೆ.

