ಜಮಖಂಡಿ (ಬಾಗಲಕೋಟ), ಏಪ್ರಿಲ್ 9: ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಪಡಿತರ ಅಕ್ಕಿ ಅಕ್ರಮ ಮಾರಾಟ ದಂಧೆ ನಿಲ್ಲದೇ ಮುಂದುವರಿಯುತ್ತಿದ್ದು, ಸರ್ಕಾರದ ಉಚಿತ ಪಡಿತರ ಯೋಜನೆ ದಂಧೆಕೋರರ ಪಾಲಾಗುತ್ತಿರುವ ಆರೋಪ ಕೇಳಿಬರುತ್ತಿದೆ.
ರಾತ್ರೋರಾತ್ರಿ ಪಡಿತರ ಅಕ್ಕಿಯನ್ನು ಗ್ರಾಮಗಳಿಂದ ಖರೀದಿ ಮಾಡಿ ಬೇರೆ ರಾಜ್ಯಗಳಿಗೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ದಂಧೆಕೋರರು ಪ್ರತಿ ಗ್ರಾಮಕ್ಕೂ ತೆರಳಿ ಕಡಿಮೆ ಬೆಲೆಯಲ್ಲಿ ಅಕ್ಕಿ ಖರೀದಿ ಮಾಡಿ, ಅದನ್ನು ಹೆಚ್ಚಿನ ಲಾಭಕ್ಕಾಗಿ ಹೊರರಾಜ್ಯಗಳಿಗೆ ಶಿಫ್ಟ್ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬಾಗಲಕೋಟ ಜಿಲ್ಲಾಡಳಿತವು ಹಲವು ಬಾರಿ ಕಠಿಣ ಕ್ರಮ ಕೈಗೊಂಡಿದ್ದರೂ, ಅಕ್ರಮ ದಂಧೆ ಇನ್ನೂ ನಿಲ್ಲದಿರುವುದು ಚಿಂತಾಜನಕವಾಗಿದೆ. ಅಧಿಕಾರಿಗಳ ಕಣ್ಗಾವಲು ತಪ್ಪಿಸಿ ದಂಧೆ ನಡೆಯುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಇತ್ತೀಚೆಗೆ ಜಮಖಂಡಿ ತಾಲೂಕಿನ ಬಿದರಿ ಗ್ರಾಮದಲ್ಲಿ ರಾತ್ರಿ 8 ಗಂಟೆಯ ಸುಮಾರಿಗೆ ಪಡಿತರ ಅಕ್ಕಿಯನ್ನು ವಾಹನದಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. KA-48 A-3382 ಸಂಖ್ಯೆಯ ಬುಲೆರೋ ವಾಹನದಲ್ಲಿ ಅಕ್ಕಿಯನ್ನು ಸಾಗಿಸಲಾಗುತ್ತಿದ್ದುದು ಕಂಡುಬಂದಿದೆ.
ಈ ಪ್ರಕರಣದ ಕುರಿತು ಸಂಬಂಧಿತ ಅಧಿಕಾರಿಗಳು ತನಿಖೆ ನಡೆಸಿ, ಅಕ್ರಮ ದಂಧೆಗೆ ತಡೆಹಿಡಿಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

