ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರುನಲ್ಲಿ ಕಳೆದ ಕೆಲವು ದಿನಗಳಿಂದ ಆಟೋ ಗ್ಯಾಸ್ (LPG) ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದ್ದು, ಸಾವಿರಾರು ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ಯಾಸ್ ಕೊರತೆಯಿಂದ ದೈನಂದಿನ ಜೀವನ ಸಾಗಿಸಲು ಕಷ್ಟವಾಗಿದ್ದು, ಅನೇಕರು ಬೀದಿಗಿಳಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಗಂಭೀರ ಪರಿಸ್ಥಿತಿಯ ನಡುವೆಯೇ ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ ಹಾಗೂ ಶೋಭಾ ಕರಂದ್ಲಾಜೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಕೇಂದ್ರ ನಾಯಕರನ್ನು ಪ್ರಶ್ನಿಸಿರುವ ಸಚಿವರು, “ಹಿಂದಿನ ಸರ್ಕಾರದ ಅವಧಿಯಲ್ಲಿ ಮೆಟ್ರೋ ದರ ಅಥವಾ ಇಂಧನ ಬೆಲೆಯಲ್ಲಿ ಅಲ್ಪ ಏರಿಕೆಯಾದಾಗಲೂ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದ ನಿಮ್ಮ ಆಕ್ರೋಶ ಈಗ ಎಲ್ಲಿ? ಲಕ್ಷಾಂತರ ಆಟೋ ಚಾಲಕರು ಗ್ಯಾಸ್ ಸಿಗದೆ ಸಂಕಷ್ಟ ಅನುಭವಿಸುತ್ತಿದ್ದರೂ ನಿಮ್ಮ ‘ಟ್ವಿಟರ್ ಪಾಂಡಿತ್ಯ’ ಯಾಕೆ ಮೌನವಾಗಿದೆ?” ಎಂದು ಕಿಡಿಕಾರಿದ್ದಾರೆ.
ಮುಂದುವರೆದು, “ಲಕ್ಷಾಂತರ ಆಟೋ ಚಾಲಕರ ಬದುಕು ಸಂಕಷ್ಟದಲ್ಲಿದ್ದರೂ ಅದು ನಿಮಗೆ ಕಾಣಿಸುತ್ತಿಲ್ಲವೇ? ಇದು ಬಡವರ ಮೇಲಿನ ಅಸಡ್ಡೆಯಲ್ಲವೇ? ದೆಹಲಿಯಲ್ಲಿ ನಿಮ್ಮದೇ ಸರ್ಕಾರವಿದ್ದು, ಪೆಟ್ರೋಲಿಯಂ ಇಲಾಖೆ ನಿಮ್ಮ ಕೈಯಲ್ಲಿದ್ದರೂ ಬೆಂಗಳೂರಿಗೆ ಅಗತ್ಯವಿರುವ ಗ್ಯಾಸ್ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಇನ್ನೂ, “ವಾಸ್ತವದಲ್ಲಿ ಜನರು ಸಮಸ್ಯೆಯಲ್ಲಿ ಸಿಲುಕಿದ್ದರೂ ದೇಶದಲ್ಲಿ ಎಲ್ಲವೂ ಸರಿಯಿದೆ ಎಂದು ತೋರಿಸುವುದು ಯಾಕೆ? ಬೆಂಗಳೂರು ನಿಮ್ಮ ಸಿನಿಮಾ ಸೆಟ್ ಅಲ್ಲ; ಇದು ಕೋಟಿ ಜನರ ಬದುಕಿನ ಕಣಜ. ಪ್ರಚಾರ ರಾಜಕಾರಣ ಬಿಟ್ಟು ತಕ್ಷಣ ಕ್ರಮ ಕೈಗೊಂಡು ಬೆಂಗಳೂರಿಗೆ ಅಗತ್ಯ ಎಲ್‌ಪಿಜಿ ಪೂರೈಕೆ ಮಾಡಬೇಕು” ಎಂದು ಎಚ್ಚರಿಕೆ ನೀಡಿದ್ದಾರೆ.
ನಗರದ ವಿವಿಧ ಗ್ಯಾಸ್ ಸ್ಟೇಷನ್‌ಗಳಲ್ಲಿ ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಕಂಗಾಲಾಗಿರುವ ಆಟೋ ಚಾಲಕರ ಪರವಾಗಿ ಸಚಿವರು ವ್ಯಕ್ತಪಡಿಸಿದ ಆಕ್ರೋಶ ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

