ಬೆಂಗಳೂರು, ಏಪ್ರಿಲ್ 11: ದೇಶದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಕ್ರಾಂತಿ ತಂದಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಇದೀಗ ಯುಪಿಐ ಹಾಗೂ ಐಎಂಪಿಎಸ್ ವ್ಯವಹಾರಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ಮುಂದಾಗಿದೆ. ಸೈಬರ್ ವಂಚನೆಗಳನ್ನು ತಡೆಯಲು ಕಠಿಣ ಕ್ರಮಗಳನ್ನು ಜಾರಿಗೆ ತರಲು ಯೋಜನೆ ರೂಪಿಸಲಾಗಿದೆ.
ಹೊಸ ಪ್ರಸ್ತಾವನೆಯ ಪ್ರಕಾರ, 10,000 ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ಯುಪಿಐ ಮೂಲಕ ಕಳುಹಿಸಿದರೆ ಆ ಹಣ ತಕ್ಷಣವೇ ಸ್ವೀಕರಿಸುವವರ ಖಾತೆಗೆ ಸೇರುವುದಿಲ್ಲ. ಬದಲಿಗೆ, ಕನಿಷ್ಠ ಒಂದು ಗಂಟೆಯ ‘ಕೂಲಿಂಗ್ ಪೀರಿಯಡ್’ ಇರಲಿದೆ. ಈ ಅವಧಿಯಲ್ಲಿ ವಹಿವಾಟನ್ನು ರದ್ದುಪಡಿಸುವ ಅವಕಾಶ ಬಳಕೆದಾರರಿಗೆ ಲಭ್ಯವಾಗಲಿದೆ.
2025ರಲ್ಲಿ ದೇಶದಲ್ಲಿ ಸುಮಾರು 22,000 ಕೋಟಿ ರೂಪಾಯಿ ಡಿಜಿಟಲ್ ವಂಚನೆಗಳಿಂದ ಕಳೆದುಹೋಗಿರುವುದು ಆತಂಕಕಾರಿ ಸಂಗತಿ. ಇದರಲ್ಲೂ 98.5% ವಂಚನೆಗಳು 10,000 ರೂಪಾಯಿಗಿಂತ ಹೆಚ್ಚಿನ ವ್ಯವಹಾರಗಳಲ್ಲೇ ನಡೆದಿದೆ ಎಂದು ವರದಿಗಳು ಸೂಚಿಸುತ್ತವೆ. ಈ ಹಿನ್ನೆಲೆಯಲ್ಲಿ ತಕ್ಷಣ ಹಣ ವರ್ಗಾವಣೆ ಮಾಡಲು ಒತ್ತಡ ಹೇರುವ ವಂಚಕರಿಂದ ಜನರನ್ನು ರಕ್ಷಿಸಲು ಈ ಕ್ರಮ ಸಹಾಯಕವಾಗಲಿದೆ.
ಹಿರಿಯ ನಾಗರಿಕರ ಸುರಕ್ಷತೆಗೆ ವಿಶೇಷ ಕ್ರಮಗಳನ್ನೂ ಪರಿಗಣಿಸಲಾಗಿದೆ. 70 ವರ್ಷ ಮೇಲ್ಪಟ್ಟವರು 50,000 ರೂಪಾಯಿಗಿಂತ ಹೆಚ್ಚಿನ ಹಣ ವರ್ಗಾವಣೆ ಮಾಡುವಾಗ, ಅವರು ಪೂರ್ವದಲ್ಲಿ ಆಯ್ಕೆಮಾಡಿದ ವಿಶ್ವಾಸಾರ್ಹ ವ್ಯಕ್ತಿಯ ಅನುಮತಿ ಪಡೆಯುವುದು ಕಡ್ಡಾಯವಾಗಬಹುದು.
ಇದಲ್ಲದೆ, ‘ಕಿಲ್ ಸ್ವಿಚ್’ ವ್ಯವಸ್ಥೆಯನ್ನೂ ಪರಿಚಯಿಸಲು ಯೋಜನೆ ಇದೆ. ಖಾತೆಯಿಂದ ಅನುಮತಿಯಿಲ್ಲದೆ ಹಣ ಕಡಿತವಾಗುತ್ತಿರುವ ಅನುಮಾನ ಇದ್ದರೆ, ಬಳಕೆದಾರರು ಒಂದು ಬಟನ್ ಒತ್ತುವ ಮೂಲಕ ಯುಪಿಐ, ನೆಟ್ ಬ್ಯಾಂಕಿಂಗ್ ಹಾಗೂ ಎಟಿಎಂ ಸೇವೆಗಳನ್ನು ತಕ್ಷಣವೇ ಸ್ಥಗಿತಗೊಳಿಸಬಹುದು.
ಅದೇ ರೀತಿ, ವೈಯಕ್ತಿಕ ಅಥವಾ ಸಣ್ಣ ವ್ಯಾಪಾರ ಖಾತೆಗಳಿಗೆ ಏಕಾಏಕಿ 25 ಲಕ್ಷ ರೂಪಾಯಿಗಿಂತ ಹೆಚ್ಚಿನ ಹಣ ಜಮೆಯಾಗಿದರೆ, ಬ್ಯಾಂಕುಗಳು ಅದರ ಮೂಲವನ್ನು ಪರಿಶೀಲಿಸಿದ ನಂತರವೇ ಬಳಕೆಗೆ ಅನುಮತಿ ನೀಡುವ ಸಾಧ್ಯತೆಯಿದೆ.
ಈ ಎಲ್ಲಾ ನಿಯಮಗಳ ಕುರಿತು ಕೇಂದ್ರ ಸರ್ಕಾರವು 2026ರ ಮೇ 8ರವರೆಗೆ ಸಾರ್ವಜನಿಕರ ಮತ್ತು ತಜ್ಞರ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ನಂತರ ಅಂತಿಮ ಮಾರ್ಗಸೂಚಿಗಳನ್ನು ಜಾರಿಗೆ ತರಲು ನಿರೀಕ್ಷಿಸಲಾಗಿದೆ.
ಪ್ರಾರಂಭದಲ್ಲಿ ಈ ನಿಯಮಗಳು ಸ್ವಲ್ಪ ಅನಾನುಕೂಲವಾಗಬಹುದು, ಆದರೆ ಜನರ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸೈಬರ್ ವಂಚಕರಿಂದ ರಕ್ಷಿಸಲು ಇದು ಮಹತ್ವದ ಹೆಜ್ಜೆಯಾಗಿದೆ.

