ಬೆಂಗಳೂರು, ಏಪ್ರಿಲ್ 11: ಪೀಣ್ಯ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-4ರ ಪೀಣ್ಯ ಎಲಿವೇಟೆಡ್ ಫ್ಲೈಓವರ್ (ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ವೇತುವೆ) ಮೇಲೆ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ನೀಡಿದ್ದ ಆದೇಶವನ್ನು ಇದೀಗ ಮುಂದೂಡಲಾಗಿದೆ.
ಫ್ಲೈಓವರ್‌ನ ಕೇಬಲ್‌ಗಳ ದುರಸ್ತಿ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಏಪ್ರಿಲ್ 13ರಿಂದ 17ರವರೆಗೆ ಅಂತಿಮ ಲೋಡ್ ಟೆಸ್ಟಿಂಗ್ ನಡೆಸಲು ಯೋಜನೆ ಹಾಕಿಕೊಂಡಿತ್ತು. ಈ ಹಿನ್ನೆಲೆ, ಬೆಳಿಗ್ಗೆ 5 ಗಂಟೆಯಿಂದ 11 ಗಂಟೆಯವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ ಎಂದು ಮೊದಲು ಪ್ರಕಟಣೆ ಹೊರಡಿಸಲಾಗಿತ್ತು.
ಆದರೆ ಅನಿವಾರ್ಯ ಕಾರಣಗಳಿಂದ ಲೋಡ್ ಟೆಸ್ಟಿಂಗ್ ಕಾರ್ಯವನ್ನು ಮುಂದೂಡಲಾಗಿದೆ ಎಂದು ಸಂಚಾರ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಮೇಲೆ ವಾಹನ ಸಂಚಾರವು ಎಂದಿನಂತೆ ಮುಂದುವರಿಯಲಿದೆ.
ಸಾರ್ವಜನಿಕರು ಯಾವುದೇ ಗೊಂದಲಕ್ಕೀಡಾಗದೇ, ಸಾಮಾನ್ಯ ಸಂಚಾರ ವ್ಯವಸ್ಥೆಯನ್ನು ಬಳಸಿಕೊಳ್ಳುವಂತೆ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

