ಬೀದರ್: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಹಾನಗರ ಪಾಲಿಕೆ ಬಜೆಟ್ ಮಂಡನೆ ವಿಚಾರಕ್ಕೆ ಭಾರಿ ಗಲಾಟೆ ಸಂಭವಿಸಿದ ಘಟನೆ ಇಂದು ನಡೆದಿದೆ. ಸಿಎಂಸಿ ಸದಸ್ಯರು, ಆಯುಕ್ತರು ಹಾಗೂ ಮೇಯರ್ ನಡುವೆ ತೀವ್ರ ವಾಗ್ವಾದ ನಡೆಯುತ್ತಾ ಸಭೆಯಲ್ಲಿ ಹೈಡ್ರಾಮಾ ನಿರ್ಮಾಣವಾಯಿತು.
ಮಹಾನಗರ ಪಾಲಿಕೆಯ ಮೇಯರ್ ಅವಧಿ ಮುಗಿದಿದ್ದರೂ, ಮೇಯರ್ ಮಹಮ್ಮದ್ ಗೌಸ್ ಬಜೆಟ್ ಮಂಡನೆಗೆ ಮುಂದಾಗಿದ್ದು, ಇದಕ್ಕೆ ಸಿಎಂಸಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಆಯುಕ್ತರು, “ಚುನಾವಣೆ ನಡೆಯದೇ ಇರುವ ಸಂದರ್ಭದಲ್ಲಿ ಮೇಯರ್ ಮುಂದುವರೆಯಲು ಅವಕಾಶವಿದೆ” ಎಂದು ಹೇಳಿದಾಗ, ಸದಸ್ಯರು “ಅದಕ್ಕೆ ಕಾನೂನು ಎಲ್ಲಿ ಇದೆ ತೋರಿಸಿ” ಎಂದು ಪ್ರಶ್ನಿಸಿದರು.
ಇನ್ನೂ ಬಜೆಟ್ ಪ್ರತಿಯನ್ನು ಕೇವಲ ನಿನ್ನೆ ರಾತ್ರಿ 8 ಗಂಟೆಗೆ ಮಾತ್ರ ನೀಡಲಾಗಿದೆ ಎಂದು ಆರೋಪಿಸಿದ ಸದಸ್ಯರು, “ಕನಿಷ್ಠ 7 ದಿನಗಳ ಮುಂಚೆಯೇ ಬಜೆಟ್ ಕಾಪಿ ನೀಡಬೇಕಾಗಿತ್ತು” ಎಂದು ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು. “ನಿಮಗೆ ನಾಚಿಕೆ ಇಲ್ಲವೇ?” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯರ ತೀವ್ರ ವಿರೋಧದ ನಡುವೆಯೂ ಆಯುಕ್ತರು ಬಜೆಟ್ ಓದಲು ಮುಂದಾದಾಗ, ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿತು. ಇದನ್ನು ಕಾನೂನುಬಾಹಿರ ಎಂದು ಆರೋಪಿಸಿದ ಸದಸ್ಯರು, “ಈ ವಿಚಾರವನ್ನು ಕೋರ್ಟ್‌ಗೆ ತೆಗೆದುಕೊಂಡು ಹೋಗುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಸಿಎಂಸಿ ಸದಸ್ಯರಾದ ಶಶಿ ಹೊಸಳ್ಳಿ, ರಾಜಾಮಂ, ಶಿವಕುಮಾರ್ ಬಾವಿಕಟ್ಟಿ ಸೇರಿದಂತೆ ಹಲವರು ಬಜೆಟ್‌ಗೆ ವಿರೋಧ ವ್ಯಕ್ತಪಡಿಸಿದರು. ಸಭೆ ಗೊಂದಲದ ನಡುವೆಯೇ ಮುಂದುವರಿದಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ಹರಿದಿದೆ.

