ಬೆಳಗಾವಿ : ಚಿಕ್ಕೋಡಿ ಉಪವಿಭಾಗದಲ್ಲಿ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಅಥಣಿ ಘಟಕದ ಬಸ್ ಚಾಲಕ ಹಾಗೂ ನಿರ್ವಾಹಕರು ಖಾಸಗಿ ಪೆಟ್ರೋಲ್ ಬಂಕ್‌ಗೆ ಬಸ್ ನುಗ್ಗಿಸಿ ಆವಾಜ್ ಹಾಕಿರುವ ಆರೋಪ ಕೇಳಿಬಂದಿದೆ.
KA23 F1095 ಸಂಖ್ಯೆಯ ವಿಜಯಪುರ–ಬೆಳಗಾವಿ ಬಸ್ ಚಾಲಕ ಮತ್ತು ನಿರ್ವಾಹಕರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ರಸ್ತೆ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆ ಕಾರು ಚಾಲಕ ನಿಧಾನವಾಗಿ ವಾಹನ ಚಲಿಸುತ್ತಿದ್ದ ವೇಳೆ, ಹಿಂಬದಿಯಿಂದ ಬಂದ ಬಸ್ ಹಾರ್ನ್ ಹಾಕಿದರೂ ಸೈಡ್ ಕೊಡಲಿಲ್ಲ ಎಂಬ ಕಾರಣಕ್ಕೆ ವಾಗ್ವಾದ ನಡೆದಿದೆ.
ಇದರಿಂದ ಕೆರಳಿದ ಬಸ್ ಚಾಲಕ ತನ್ನ ಮಾರ್ಗ ಬದಲಿಸಿ ಕಾಗವಾಡ–ಸಿರಗುಪ್ಪಿ ರಸ್ತೆಯ ಜಿಯೋ ಪೆಟ್ರೋಲ್ ಬಂಕ್‌ಗೆ ಬಸ್ ನುಗ್ಗಿಸಿ ಆವಾಜ್ ಹಾಕಿದ್ದಾನೆ ಎನ್ನಲಾಗಿದೆ. “ಇವರು ಚಾಲಕರೋ ಅಥವಾ ಮರಿ ರೌಡಿಗಳೋ?” ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.
ಚಿಕ್ಕೋಡಿ ಭಾಗದಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಸಿಬ್ಬಂದಿಗಳ ಗಲಾಟೆಗಳು ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

