ಬೆಂಗಳೂರು, ಏಪ್ರಿಲ್ 21: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ತಾಪಮಾನ ಏರಿಕೆಯಾಗಿದ್ದು, ಮುಂದಿನ ಎರಡು ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ತೀವ್ರವಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈಗಾಗಲೇ ಕರಾವಳಿ ಮತ್ತು ಕಲ್ಯಾಣ ಕರ್ನಾಟಕ ಭಾಗಗಳು ಉಷ್ಣ ಅಲೆಯ ಕಾಟದಿಂದ ತತ್ತರಿಸುತ್ತಿದ್ದು, ಮುಂದಿನ ದಿನಗಳಲ್ಲಿ ತಾಪಮಾನವು 45 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಬಹುದು ಎಂದು ಮುನ್ಸೂಚನೆ ನೀಡಲಾಗಿದೆ. ಜನರು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಅನಗತ್ಯವಾಗಿ ಹೊರಗೆ ಹೋಗಬಾರದು ಹಾಗೂ ಹೆಚ್ಚು ನೀರು ಸೇವಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಕರಾವಳಿ ಭಾಗದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದೂ ಉಷ್ಣ ಅಲೆ ಮುಂದುವರಿಯಲಿದ್ದು, ಹೀಟ್ ವೇವ್ ಅಲರ್ಟ್ ಘೋಷಿಸಲಾಗಿದೆ. ಜೊತೆಗೆ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯ ಸಾಧ್ಯತೆಯೂ ಇದೆ ಎಂದು ಇಲಾಖೆ ತಿಳಿಸಿದೆ.
ಉತ್ತರ ಒಳನಾಡಿನ ವಿಜಯಪುರ, ಕಲಬುರ್ಗಿ, ಯಾದಗಿರಿ, ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಪ್ರದೇಶಗಳಲ್ಲಿ ಒಣಹವೆಯೇ ಮುಂದುವರಿಯಲಿದೆ.
ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಮುಂದಿನ ದಿನಗಳಲ್ಲಿ ರಾಜ್ಯದೆಲ್ಲೆಡೆ ತಾಪಮಾನ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ. ಬೇಸಿಗೆ ರಜೆಯಲ್ಲಿರುವ ಮಕ್ಕಳು ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆಯದಂತೆ ಪಾಲಕರು ಗಮನಹರಿಸಬೇಕು ಎಂದು ತಿಳಿಸಲಾಗಿದೆ.
ಆರೋಗ್ಯ ಸಲಹೆಗಳು:
ಉಷ್ಣ ಅಲೆ ಹಾಗೂ ಹೀಟ್ ಸ್ಟ್ರೋಕ್‌ನಿಂದ ರಕ್ಷಿಸಿಕೊಳ್ಳಲು ಮಧ್ಯಾಹ್ನ 12ರಿಂದ 4ರವರೆಗೆ ಸೂರ್ಯನ ಕಿರಣಗಳಿಗೆ ನೇರವಾಗಿ ಒಳಪಡುವುದನ್ನು ತಪ್ಪಿಸಲು ಸೂಚಿಸಲಾಗಿದೆ. ನಿಯಮಿತವಾಗಿ ನೀರು ಕುಡಿಯುವುದು, ಎಳನೀರು, ಮಜ್ಜಿಗೆ ಮತ್ತು ಹಣ್ಣುಗಳ ರಸ ಸೇವಿಸುವುದು ಒಳ್ಳೆಯದು. ತಿಳಿ ಬಣ್ಣದ ಸಡಿಲ ಹತ್ತಿ ಬಟ್ಟೆ ಧರಿಸುವುದು ಹಾಗೂ ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿ ಬಳಸುವುದು ಅಗತ್ಯ. ಕಾಫಿ, ಟೀ ಹಾಗೂ ಹೆಚ್ಚಿನ ಸಕ್ಕರೆಯ ಪಾನೀಯಗಳನ್ನು ಕಡಿಮೆ ಸೇವಿಸುವಂತೆ ಸಲಹೆ ನೀಡಲಾಗಿದೆ.
ಏಪ್ರಿಲ್ 22ರವರೆಗೆ ಉತ್ತರ ಒಳನಾಡಿನಲ್ಲಿ ಗಂಟೆಗೆ 40–50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ದಕ್ಷಿಣ ಒಳನಾಡಿನಲ್ಲಿ 30–40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಕರಾವಳಿ ಭಾಗಗಳಲ್ಲಿ ಮುಂದಿನ ಐದು ದಿನಗಳವರೆಗೆ ಉಷ್ಣ ಅಲೆ ಮುಂದುವರಿಯುವ ಸಾಧ್ಯತೆ ಇದ್ದು, ಜನರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಇಲಾಖೆ ಸೂಚಿಸಿದೆ.

