ಕನ್ನಡ ಹಿರಿಯ ನಟ ಹಾಗೂ ಖ್ಯಾತ ನಿರ್ಮಾಪಕ, ಹಿರಿಯ ದ್ವಾರಕೀಶ್ ಅವರ ನಿಧಾನಕ್ಕೆ ಸಿಎಂ, ಡಿಸಿಎಂ ಮತ್ತು ಮಾಜಿ ಸಿಎಂ ಸಂತಾಪ ವ್ಯಕ್ತಪಡಿಸಿದ್ದಾರೆ.
ನಟ, ನಿರ್ದೇಶಕ, ನಿರ್ಮಾಪಕರಾಗಿ ಬಹುಕಾಲ ಕನ್ನಡ ಚಿತ್ರರಂಗದ ಸೇವೆಗೈದ ಕನ್ನಡಿಗರ ಪ್ರೀತಿಯ ‘ಪ್ರಚಂಡ ಕುಳ್ಳ’ ದ್ವಾರಕೀಶ್ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಡಾ. ರಾಜ್‌ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅವರಂತಹ ಮೇರು ನಟರೊಂದಿಗೆ ಪರದೆ ಹಂಚಿಕೊಳ್ಳುತ್ತಿದ್ದರೂ ಹಾಸ್ಯಭರಿತ ನಟನೆಯ ಮೂಲಕ ನೋಡುಗರ ಮನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು.
ದ್ವಾರಕೀಶ್ ಅವರ ನಿಧನದಿಂದ ಕನ್ನಡ ಚಿತ್ರರಂಗ ಬಡವಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ, ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.
ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾದ ಶ್ರೀ ದ್ವಾರಕೀಶ್ ಅವರು ನಿಧನರಾದ ಸಂಗತಿ ತಿಳಿದು ಮನಸ್ಸಿಗೆ ಅಪಾರ ನೋವುಂಟಾಯಿತು. 1964ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, ಹಾಸ್ಯ ಕಲಾವಿದ, ನಾಯಕ ಹಾಗೂ ಪೋಷಕ ನಟನಾಗಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕನ್ನಡ ಚಿತ್ರರರಂಗಕ್ಕೆ ಅಮೂಲ್ಯ ಕೊಡುಗೆ ನೀಡಿದ ದ್ವಾರಕೀಶ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಭಗವಂತನು ಅವರ ಕುಟುಂಬಕ್ಕೆ ಅಗಲಿಕೆಯ ನೋವು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಿಸಿಎಂ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಕನ್ನಡದ ಹಿರಿಯ ನಟರಾದ ಶ್ರೀ ದ್ವಾರಕೀಶ್ ಅವರ ಅಗಲಿಕೆ ನನಗೆ ಬಹಳ ನೋವುಂಟು ಮಾಡಿದೆ. ಕಲಾವಿದರಾಗಿ ಅಷ್ಟೇ ಅಲ್ಲದೆ; ನಿರ್ಮಾಪಕರಾಗಿ, ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಅವರು ಸಲ್ಲಿಸಿರುವ ಅನುಪಮ ಸೇವೆ ಆವಿಸ್ಮರಣೀಯ.
ವರನಟ ಡಾ||ರಾಜ್‌ಕುಮಾರ್, ಡಾ||ವಿಷ್ಣುವರ್ಧನ್, ಶ್ರೀ ಅಂಬರೀಶ್‌ರಂಥ ದಿಗ್ಗಜರ ಜತೆ ನಟಿಸಿದ್ದ ಅವರು, ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಿನಿಮಾ ಆಸ್ತಿಯಾಗಿದ್ದರು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.

