ಬೆಂಗಳೂರು: ಸ್ಯಾಂಡಲ್‌ವುಡ್ ನಟ (Sandalwood Actor) ಯುವ ರಾಜ್‌ಕುಮಾರ್ (Yuva Rajkumar) ಸಲ್ಲಿಸಿದ್ದ ವಿಚ್ಚೇದನ (Divorce) ಅರ್ಜಿ ವಿಚಾರಣೆ ಆಗಸ್ಟ್ 23ಕ್ಕೆ ಮುಂದೂಡಿಕೆಯಾಗಿದೆ.
ಇಂದು 1 ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಕಲ್ಪನಾ ಅವರಿದ್ಧ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ವಿಚ್ಚೇದನ ಅರ್ಜಿಗೆ ಯುವ ಪತ್ನಿ ಶ್ರೀದೇವಿ ಭೈರಪ್ಪ (Sridevi Byrappa) ಅವರ ಪರ ವಕೀಲರು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.

ಈ ಮನವಿಗೆ ನ್ಯಾಯಾಧೀಶರು, ಇದು ಕೌಟುಂಬಿಕ ಕಲಹವಾಗಿರುವ ಕಾರಣ ಮಿಡಿಯೇಷನ್ ಕೌನ್ಸಿಲಿಂಗ್ ಮುಕ್ತಾಯವಾಗಲಿ. ಮೊದಲು ಕೌನ್ಸಿಲಿಂಗ್ ಮುಕ್ತಾಯವಾಗಬೇಕು.ಕೌನ್ಸಿಲಿಂಗ್ ಮುಕ್ತಾಯದ ಬಳಿಕ ಇಬ್ಬರ ತೀರ್ಮಾನ ಕೇಳಬೇಕು. ಬಳಿಕ ವಿಚ್ಚೇದನದ ಆಕ್ಷೇಪಣೆ ಕೇಳುವುದಾಗಿ ನ್ಯಾಯಾಧೀಶರು ಹೇಳಿದರು. ಅಂತಿಮವಾಗಿ ಕೋರ್ಟ್ ಆಗಸ್ಟ್ 23ಕ್ಕೆ ಮಿಡಿಯೇಷನ್ ದಿನಾಂಕ ನಿಗದಿ ಮಾಡಿ ವಿಚಾರಣೆ ಮುಂದೂಡಿತು.
ಯುವ ರಾಜ್ ಕುಮಾರ್ ಹಾಗೂ ಶ್ರೀದೇವಿ ವಿವಾಹವಾಗಿ ಐದು ವರ್ಷಗಳಾಗಿವೆ. ಆದರೆ ಇತ್ತೀಚೆಗೆ ಅವರ ದಾಂಪತ್ಯದಲ್ಲಿ ಬಿರುಕುಂಟಾಗಿದೆ. ಸುದ್ದಿಗೋಷ್ಠಿ ನಡೆಸಿದ್ದ ಯುವ ರಾಜ್ ಕುಮಾರ್ ಪರ ವಕೀಲರು, ಶ್ರೀದೇವಿಗೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಶ್ರೀದೇವಿ, ಯುವ ರಾಜ್ ಕುಮಾರ್ ಹಾಗೂ ಸಪ್ತಮಿ ಗೌಡ ಅಕ್ರಮ ಸಂಬಂಧದಲ್ಲಿದ್ದಾರೆ. ಇಬ್ಬರೂ ಒಟ್ಟಿಗೆ ರೂಂ ನಲ್ಲಿ ಶ್ರೀದೇವಿ ಕೈಗೆ ಸಿಕ್ಕಿ ಹಾಕಿಕೊಂಡಿದ್ದರು ಎಂದಿದರು.

ಅಮೆರಿಕಕ್ಕೆ ಓದಲು ತೆರಳಿದ್ದ ಶ್ರೀದೇವಿ ವಿಚ್ಛೇದನ ಅರ್ಜಿ ಸಲ್ಲಿಕೆಯಾದ ಬಳಿಕ ಭಾರತಕ್ಕೆ ಮರಳಿದ್ದು ಕಳೆದ ಕೆಲವು ದಿನಗಳಿಂದಲೂ ಇಲ್ಲಿಯೇ ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಶ್ರೀದೇವಿ, ನನಗೆ ಅಂಟಿರುವ ಕಳಂಕ ಹೋಗಲಾಡಿಸಿಕೊಳ್ಳುವವರೆಗೆ ಹೋರಾಟ ಮಾಡುತ್ತಲೇ ಇರುತ್ತೇನೆ ಎಂದಿದ್ದಾರೆ.

