ಬೆಂಗಳೂರು. ಜು. 17: ಶಾಸಕಾಂಗ ಪಕ್ಷದ ನಾಯಕ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಜಿಟಿಡಿ ರೆಬಲ್ ಆಗಿದ್ದಾರೆ ಎನ್ನಲಾಗಿದೆ. ಜೆಡಿಎಸ್ ನಲ್ಲಿ ಸದ್ಯಕ್ಕೆ ಅತ್ಯಂತ ಹಿರಿಯ ಸದಸ್ಯರಾಗಿರುವ ಜಿಟಿಡಿ ಸಹಜವಾಗಿಯೇ ವಿಧಾನಸಭೆಯಲ್ಲಿ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ಸಿಗುವ ನಿರೀಕ್ಷೆ ಇತ್ತು ಆದರೆ ಕೊನೆಯ ಕ್ಷಣದಲ್ಲಿ ಚಿಕ್ಕನಾಯಕನಹಳ್ಳಿ ಸುರೇಶ್ ಬಾಬುಗೆ ಅವರಿಗೆ ಶಾಸಕಾಂಗ ಪಕ್ಷದ ನಾಯಕ ಸ್ಥಾನ ನೀಡಲಾಗಿತ್ತು.
ಕುಮಾರಸ್ವಾಮಿ ನಿರ್ಧಾರದ ಹಿಂದೆ ಮೈಸೂರು ಜೆಡಿಎಸ್ ನಾಯಕರ ಕೈವಾಡ ಎನ್ನಲಾಗುತ್ತಿದ್ದು ಕುಮಾರಸ್ವಾಮಿ ಆಪ್ತರಾಗಿರುವ ಸಾರಾ ಮಹೇಶ್, ಜಿಟಿಡಿಗೆ ಶಾಸಕಾಂಗ ನಾಯಕ ಸ್ಥಾನ ತಪ್ಪಿಸಿದ್ದಾರೆ ಎಂಬ ಗುಸುಗುಸು ಕೇಳಿಬಂದಿದೆ. ಈ ಕುರಿತು ಆಪ್ತರ ಬಳಿ ಜಿಟಿಡಿ ಹೇಳಿಕೊಂಡಿದ್ದಾರಂತೆ.
ಹಿಂದೆಯೂ ಸಾಕಷ್ಟು ಸಲ ಜೆಡಿ ಎಸ್ ವರಿಷ್ಠರ ಮೇಲೆ ಮುನಿಸಿಕೊಂಡಿದ್ದ ಜಿಟಿಡಿ ಮೈತ್ರಿ ಸರ್ಕಾರದ ಅವಧಿಯಲ್ಲಿ ಸಹಕಾರ ಕ್ಷೇತ್ರದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದ ಜಿ ಟಿ ದೇವೇಗೌಡ ಅವರಿಗೆ ಆದರೆ ಉನ್ನತ ಶಿಕ್ಷಣ ಖಾತೆಯನ್ನು ನೀಡಲಾಗಿತ್ತು. ಬಹಳ ದಿನಗಳ ಕಾಲ ಖಾತೆಯನ್ನು ವಹಿಸಿ ಕೊಳ್ಳದೇ ಅಸಮಾಧಾನ ತೋರ್ಪಡಿಸಿದ್ದ ಜಿಟಿಡಿಯನ್ನು ಸಂಧಾನ ಮಾಡಿ ಕುಮಾರಸ್ವಾಮಿ ಮನವೊಲಿಸಿದ್ದರು.
ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರಲು ಪ್ರಯತ್ನ ಮಾಡಿದ್ದ ಜಿ ಟಿ ದೇವೇಗೌಡ ಅವರು ದಳಪತಿ ಗಳ ಮೇಲೆ ಅಸಮಾಧಾನ ಗೊಂಡು ಕಾಂಗ್ರೆಸ್ ಕಡೆ ಮನಸು ಮಾಡಿದ್ದರು. ಆಗ ಕಡೆಗೆ ಖುದ್ದಾಗಿ ಎಚ್ ಡಿ ದೇವೇಗೌಡರೇ ಜಿಟಿಡಿ ಮನೆಗೆ ತೆರಳಿ ಅಸಮಾಧಾನ ಶಮನ ಮಾಡಿದ್ದರು.
ಇದೀಗ ಶಾಸಕಾಂಗ ಸ್ಥಾನ ಕೈತಪ್ಪಿದ ಅಸಮಾಧಾನಗೊಂಡು ಎರಡು ದಿನ ವಿಧಾನಸಭೆಗೂ ಗೈರಾಗಿದ್ದಾರೆ. ಜೆಡಿಎಸ್ ನಿಂದ ನನಗೆ ಪದೇ ಪದೇ ಅನ್ಯಾಯ ಆಗಿದೆ, ಇಡೀ ಅಧಿವೇಶನ ಕ್ಕೆ ನಾನು ಬರುವುದೇ ಇಲ್ಲ ಎಂದು ಆಪ್ತರ ಬಳಿ ಅಳಲು ತೋಡಿಕೊಡದಿದ್ದಾರೆ.

