ಹೊಸದಿಲ್ಲಿ: ದೇಶದಲ್ಲಿ ಯಾವುದೇ ನಾಯಕನೂ ಸೂಪರ್ ಮ್ಯಾನ್ ನಂತಾಗಲು ಪ್ರಯತ್ನಿಸಬಾರದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಮೋಹನ್ ಭಾಗವತ್ ಅವರ ಸೂಪರ್ ಮ್ಯಾನ್ ಹೇಳಿಕೆಯು ಪ್ರಧಾನಿ ನರೇಂದ್ರ ಮೋದಿಯವರ ಮೇಲೆಯೇ ಪ್ರಯೋಗಿಸಿದು ಎನ್ನಲಾಗುತ್ತಿದೆ. ಕಾಲಾನುಕ್ರಮದಲ್ಲಿ ಮೋದಿ ವಿರುದ್ಧ ಆಗಾಗ ಟೀಕೆ – ಟಿಪ್ಪಣಿಗಳನ್ನು ಮಾಡುವ, ಪುನಃ ಮೋದಿಯವರ ವಿರುದ್ಧ ತಮ್ಮ ಟೀಕಾಸ್ತ್ರ ಪ್ರಯೋಗಿಸಿದ್ದಾರೆ ಎನ್ನಲಾಗುತ್ತಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಸ್ವಯಂ ಅಭಿವೃದ್ಧಿಯ ಹಂತದಲ್ಲಿ ಯಾವುದೇ ಮನುಷ್ಯ ತನ್ನಷ್ಟಕ್ಕೆ ತಾನು ಸೂಪರ್ ಮ್ಯಾನ್ ನಂತಾಗಲು ಪ್ರಯತ್ನಿಸಬಹುದು. ಆನಂತರ ದೇವರಾಗಲು ಅಥವಾ ಭಗವಂತನಾಗಲೂ ಪ್ರಯತ್ನಿಸಬಹುದು. ಕಟ್ಟಕಡೆಗೆ ತಾನೇ ಸ್ವಯಂಭು, ತಾನೇ ವಿಶ್ವರೂಪದ ಪ್ರತೀಕ ಎಂಬಂತಾಗಲು ಇನ್ನಿಲ್ಲದ ಕಸರತ್ತುಗಳನ್ನು ಮಾಡಬಹುದು. ಆದರೆ, ಮುಂದೇನಾಗುತ್ತದೆ ಎಂದು ಹೇಳಲಾಗದು’’ ಎಂದು ಹೇಳಿದ್ದಾರೆ.
“ಮುಂದೆ ಯಾವಾಗ ಏನಾಗುತ್ತೆ ಅಂತ ಹೇಳೋಕ್ಕಾಗಲ್ಲ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಎಚ್ಚರಿಕೆಯಿಂದ ಜೀವನ ಮಾಡಬೇಕಾಗುತ್ತದೆ. ಆತ್ಮೋನ್ನತಿ ಹಾಗೂ ವ್ಯಕ್ತಿತ್ವ ವಿಕಸನ ಎಂಬುದು ನಿರಂತರವಾಗಿ ನಡೆಯುವಂಥ ಪ್ರಕ್ರಿಯೆ. ಅದರಲ್ಲಿ ತೊಡಗಿಸಿಕೊಳ್ಳುವುದೆಂದರೆ ಅದು ಅಭಿವೃದ್ಧಿಯಲ್ಲಿ ನಿರಂತರವಾಗಿ, ದಣಿವಾಗದ ರೀತಿಯಲ್ಲಿ ಮುಂದುವರೆಯುವುದು ಎಂದರ್ಥ’’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಭಾಗತ್ ಅವರ ಈ ಹೇಳಿಕೆ ಹೊರಬೀಳುತ್ತಲೇ ಕಾಂಗ್ರೆಸ್ ಅದನ್ನು ಬಳಸಿಕೊಂಡು ಮೋದಿಯವರ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದೆ.

