ಬೆಂಗಳೂರು : ವಿಧಾನಸಭೆ ಹಾಗೂ ವಿಧಾನಪರಿಷತ್ನಲ್ಲಿ ಕಳೆದ ಒಂದು ವಾರದಿಂದ ಹಗರಣಗಳದ್ದೇ ಸದ್ದು. ಮುಡಾ ಸೈಟು ಹಂಚಿಕೆ, ವಾಲ್ಮೀಕಿ ನಿಗಮದಲ್ಲಾಗಿರುವ ಬಹುಕೋಟಿ ಹಗರಣದ ವಿರುದ್ಧ ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷಗಳ ಹೋರಾಟ ತೀವ್ರಗೊಂಡಿದೆ. ಇಷ್ಟು ದಿನ ಸದನದ ಬಾವಿಗಿಳಿದು ಹೋರಾಟ ಮಾಡುತ್ತಿದ್ದ ಬಿಜೆಪಿ, ಜೆಡಿಎಸ್ ಸದಸ್ಯರು ಬುಧವಾರದಿಂದ ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ.
ಅಹೋರಾತ್ರಿ ಧರಣಿ ವೇಳೆ , ತಾಳ, ಭಜನೆ, ಗೋವಿಂದ ಗೋವಿಂದ ಎಂದು ಘೋಷಣೆ ಕೂಗಿ ಆಡಳಿತ ಪಕ್ಷದ ವಿರುದ್ಧ ವಿಪಕ್ಷ ನಾಯಕರು ಗುಡುಗಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಶ್ರೀರಾಮನ ಭಜನೆ ಮಾಡಿದರು. ಭಜನೆ, ತಾಳಕ್ಕೆ ಮಾಜಿ ಸಚಿವ ಪ್ರಭು ಚೌವ್ಹಾಣ್ ಹೆಜ್ಜೆ ಹಾಕಿದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ವಿಧಾನಸೌಧದ ಒಳಗೆ ನಾಯಕರು ರೌಂಡ್ಸ್ ಹಾಕಿದರು. ಸ್ಪೀಕರ್ ಆಸನದ ಹತ್ತಿರವೇ ದಿಂಬು, ಹಾಸಿಗೆ ಹಾಕೊಂಡು ನಿದ್ದೆಗೆ ಜಾರಿದರು. ಬೆಳಗ್ಗೆ ನಿದ್ದೆಯಿಂದ ಎದ್ದ ಬಳಿಕ ಹಲವು ಶಾಸಕರು ವಿಧಾನಸೌಧ ಮುಂಭಾಗದಲ್ಲಿ ವ್ಯಾಯಾಮ, ವಾಕಿಂಗ್ ಮಾಡಿದರು.
ವಿಧಾನಪರಿಷತ್ಗೆ ತೆರಳಿದ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪರಿಷತ್ ಸದಸ್ಯರ ಜೊತೆಗೆ ಮಾತುಕತೆ ಮಾಡುತ್ತಾ, ಗಾನಗೋಷ್ಠಿಗೆ ದನಿಗೂಡಿಸಿದರು. ಇದೇ ವೇಳೆ ಜೆಡಿಎಸ್ ಸದಸ್ಯ ಬೋಜೇಗೌಡ ‘ಅನ್ಯಾಯಕಾರಿ ಬ್ರಹ್ಮ’ ಅಂತಾ ಹಾಡುವುದರ ಜೊತೆಗೆ ನಾಟಕದ ಡೈಲಾಗ್ ಹೇಳಿ ಇತರ ಸದಸ್ಯರನ್ನು ರಂಜಿಸಿದರು.ಇದೇ ವೇಳೆ ಸಂಸದೀಯ ವ್ಯವಹಾರಗಳ ಸಚಿವ ಹೆಚ್ಕೆ ಪಾಟೀಲ್ ಭೇಟಿ ನೀಡಿ ವಿಪಕ್ಷ ಶಾಸಕರ ಯೋಗಕ್ಷೇಮ ವಿಚಾರಿಸಿದರು. ಆರ್. ಅಶೊಕ್ ಜೊತೆಗೂ ಮಾತುಕತೆ ನಡೆಸಿದರು.
ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮಾತನಾಡುವ ಹಾಗೂ ಹೋರಾಟ ಮಾಡುವ ಹಕ್ಕು ಸಂವಿಧಾನ ನೀಡಿದೆ. ಆದರೆ ಸ್ಪೀಕರ್ ಖಾದರ್ ಅವರಾಗಲಿ, ಸ್ಪೀಕರ್ ಅವರಾಗಲಿ ನಮಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡಿಲ್ಲ. ಇದನ್ನು ಖಂಡಿಸಿ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿಯನ್ನು ನಡೆಸುತ್ತಿದ್ದೇವೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡಿ, ಅಹಿಂದ ನಾಯಕರು ಅಂತಾ ಸಿದ್ದರಾಮಯ್ಯ ಹೇಳ್ತಾರೆ, ವಾಲ್ಮೀಕಿ ಹಗರಣದಲ್ಲಿ 187 ಕೋಟಿ ಹಗರಣ ಆಗಿದೆ. ಮೂಡಾ ಹಗರಣದಲ್ಲಿ ಸಾವಿರಾರು ಕೋಟಿ ಅಕ್ರಮ ಆಗಿದೆ, ಸಿದ್ದರಾಮಯ್ಯ ಕುಟುಂಬದ ಸದಸ್ಯರಿಗೆ ಸೈಟು ಹೋಗಿದೆ. ಇದು ಬಡವರಿಗೆ ಮಾಡಿದ ಅನ್ಯಾಯ, ಮೂಡ ಹಗರಣ ವಿರೋಧಿಸಿ ಬೆಂಗಳೂರಿನಿಂದ ಮೈಸೂರಿಗೆ ಹೋಗಬೇಕಾದರೆ ತಡೆಯುತ್ತಾರೆ. ಇಲ್ಲಿ ಆದರೂ ಚರ್ಚೆ ಮಾಡಬೇಕು ಅಂದರೆ ಅದಕ್ಕೂಅವಕಾಶ ಇಲ್ಲ . ಸಿಎಂ ವಿರೋಧ ಪಕ್ಷಗಳಿಗೆ ಸವಾಲು ಹಾಕ್ತಾರೆ ಅಂದುಕೊಂಡಿದ್ವಿ, ಅದರೆ ಈ ರೀತಿ ಪಲಯಾನವಾದಿ ಆಗ್ತಾರೆ ಅಂದುಕೊಂಡಿರಲಿಲ್ಲ.
ಆಡಳಿತ ಪಕ್ಷದ ಸದಸ್ಯರು ಸಿಎಂ ಭೇಟಿ ಮಾಡಿದಾಗ ನೀವು ಯಾರು ಕೂಡ ನಮ್ಮ ಪರ ನಿಲುತ್ತಾ ಇಲ್ಲ ಅಂತಾ ಸಿದ್ದರಾಮಯ್ಯ ಗರಂ ಆಗಿದ್ದರು ಅಂತೆ. ಹೀಗಾಗಿ ಸಿಎಂ ಅವರಿಗೆ ಆಗ್ರಹ ಮಾಡ್ತೇವೆ, ಸರ್ಕಾರದ ಪಾಪದ ಕೊಡ ತುಂಬಿದೆ. ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಹೀಗಾಗಿ ಬಿಜೆಪಿ ಜೆಡಿಎಸ್ ಸದಸ್ಯರು ಸೇರಿ ಧರಣಿ ಮಾಡ್ತಾ ಇದ್ದೇವೆ ಎಂದು ತಿಳಿಸಿದರು.

