ಬೆಂಗಳೂರು: ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ರಾಜ್ಯದ ಜನ ಆತಂಕ ಪಡಬಾರದು. ಅರೋಗ್ಯವಾಗಿ ಇದ್ದಾರೆ ಎಂದು ಕುಮಾರಸ್ವಾಮಿ ಅವರ ಪುತ್ರ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ. 10-15 ದಿನಗಳ ನಿರಂತರ ಓಡಾಟ. ರಾತ್ರಿ 1 ಗಂಟೆಯಾದ್ರೂ ವಿಶ್ರಾಂತಿ ಪಡೆದುಕೊಳ್ಳಲು ಆಗಿಲ್ಲ.ಇವತ್ತು ರಾತ್ರಿಯೇ ಕುಮಾರಸ್ವಾಮಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬಹುದು ಎಂದರು.
ಮೂರನೇ ಬಾರಿ ಹೃದಯದ ವಾಲ್ ಬದಲಿಸಲಾಗಿತ್ತು. ನಾಳೆ ಬೆಳ್ಳಿಗ್ಗೆ ದೆಹಲಿಗೆ ಟೈಮಿಂಗ್ ಚೇಂಜ್ ಮಾಡಿಕೊಂಡು ಹೊರಡಬಹುದು. ಎಕೋ ಸೇರಿದಂತೆ ಎಲ್ಲಾ ಪರೀಕ್ಷೆ ನಡೆಸಿದ್ದಾರೆ ಎಂದು ಹೇಳಿದರು. ಕೇಂದ್ರದ ಸಚಿವರಾದ ಬಳಿಕ ೧೨ ಗಂಟೆವರೆಗೂ ಪುಸ್ತಕ ಓದುತ್ತಾರೆ. ದೇಶಕ್ಕೆ ಏನಾದರೂ ಕೊಡಬೇಕು ಅಂತಾ ಕೆಲಸ ಮಾಡುತ್ತಾರೆ. ಶಿವ, ರೈತರ, ರಾಜ್ಯದ ಜನರ ಆರ್ಶೀವಾದದಿಂದ ಅರೋಗ್ಯವಾಗಿದ್ದಾರೆ ಎಂದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿಸುರೇಶ್ ಬಾಬು ಮಾತನಾಡಿ, ಅವರ ದಿನಚರಿಯಲ್ಲಿ ಸ್ವಲ್ಪ ಸರಿದೂಗಿಸಬೇಕು. ರಾಜಕೀಯ ಒತ್ತಡ ಇದೆ. ಬೆಳಿಗ್ಗೆ ಬೇಗ ಹೇಳುತ್ತಾರೆ. ರಾತ್ರಿ ತಡವಾಗಿ ಮಲಗುತ್ತಾರೆ. ಇದನ್ನು ಅವರು ಗಮನಕ್ಕೆ ತೆಗೆದುಕೊಳ್ಳದೇ ಕೆಲಸ ಮಾಡುತ್ತಿದ್ದಾರೆ ಎಂದರು.
ಇವತ್ತು ನಂಜನಗೂಡು, ಮೈಸೂರಿಗೆ ಬಂದಿದ್ದರು. ಅಲ್ಲಿ ಸುದ್ದಿಗೋಷ್ಠಿ ನಡೆಸಿದರು. ಬಳಿಕ ಬೆಂಗಳೂರಿಗೆ ಬಂದು ನಮ್ಮ ಪಕ್ಷದ ಸಭೆಯಲ್ಲಿ ಭಾಗಿಯಾಗಿದ್ದರು. ಅನಂತರ ಮೈತ್ರಿ ಪಕ್ಷದ ಸಭೆಯಲ್ಲಿ ಭಾಗಿಯಾಗಿದ್ದರು.ಈ ವೇಳೆ ಮೂಗಿನ ರಕ್ತ ಬಂದಿದೆ. ಆಸ್ಪತ್ರೆಗೆ ಬರುವಷ್ಟರಲ್ಲಿ ರಕ್ತಸ್ರಾವ ನಿಂತು ಹೋಗಿದೆ ಎಂದು ಅವರು ಹೇಳಿದರು.
ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಬೇಕು ಅಂತಾ ಹೇಳಿದ್ದಾರೆ. ಬೆಳಿಗ್ಗೆ ಇಂತಹ ಲಕ್ಷಣಗಳು ಕಂಡುಬರಲಿಲ್ಲ. ನಮ್ಮ ಡಾ.ಸಿ.ಎನ್. ಮಂಜುನಾಥ್ ಅವರು ವಿಶ್ರಾಂತಿ ಪಡೆಯಲು ಸಲಹೆ ಮಾಡಿದ್ದಾರೆ. ಸದ್ಯ ಗಾಬರಿ ಪಡುವಂತ ತೊಂದರೆ ಇಲ್ಲ.ಆರೋಗ್ಯ ಸಮಸ್ಯೆ ಇಲ್ಲ. ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು.