ನವದೆಹಲಿ: ದೆಹಲಿಯಲ್ಲಿ ಸುರಿದ ಭಾರೀ ಮಳೆಯಿಂದ ಕೋಚಿಂಗ್ ಕೇಂದ್ರಗಳ ಬೇಸ್ ಮೆಂಟ್ ಗಳಿಗೆ ನೀರು ನುಗ್ಗಿದ್ದ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಬೆನ್ನಲ್ಲೇ ಸೂಕ್ತ ಮೂಲಸೌಕರ್ಯ ಹಾಗೂ ನಿರ್ವಹಣೆಯಿಲ್ಲದ ಕಾರಣಕ್ಕಾಗಿ ದೆಹಲಿಯ 13 ಕೋಚಿಂಗ್ ಕೇಂದ್ರಗಳಿಗೆ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಬೀಗ ಜಡಿದಿದೆ.
ಪ್ರತಿಷ್ಠಿತವೆನಿಸಿರುವ ಹಾಗೂ ದೇಶದ ಟಾಪ್ ಕೋಚಿಂಗ್ ಸೆಂಟರ್ ಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿರುವ ರಾವುಸ್ ಕೋಚಿಂಗ್ ಸೆಂಟರ್ ನ ಬೇಸ್ ಮೆಂಟ್ ನಲ್ಲಿ ಆಶ್ರಯ ಪಡೆದಿದ್ದ ವಿದ್ಯಾರ್ಥಿಗಳೇ ಸಾವಿಗೀಡಾಗಿರುವುದು. ಆ ಹಿನ್ನೆಲೆಯಲ್ಲಿ ಎಲ್ಲಾ ಕೋಚಿಂಗ್ ಸೆಂಟರ್ ಗಳಲ್ಲಿರುವ ಮೂಲಸೌಕರ್ಯಗಳನ್ನು ಪರಿಶೀಲನೆ ನಡೆಸಲು ಸ್ಥಳೀಯಾಡಳಿತ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿತ್ತು.
ಅದರಂತೆ, ಗುಣಮಟ್ಟದ ಮೂಲಸೌಕರ್ಯಗಳಿಲ್ಲದ ಐಎಎಸ್ ಗುರುಕುಲ, ಚಾಹಲ್ ಅಕಾಡೆಮಿ, ಪ್ಲುಟಸ್ ಅಕಾಡೆಮಿ, ಸಾಯಿ ಟ್ರೇಡಿಂಗ್, ಐಎಎಸ್ ಸೇತು, ಟಾಪರ್ಸ್ ಅಕಾಡೆಮಿ, ದೈನಿಕ್ ಸಂವಾದ್, ಸಿವಿಲ್ಸ್ ಡೈಲಿ ಐಎಎಸ್, ಕೆರಿಯರ್ ಪವರ್, 99 ನೋಟ್ಸ್, ವಿದ್ಯಾ ಗುರು, ಮಾರ್ಗದರ್ಶನ ಐಎಎಸ್, ಮತ್ತು ಈಸಿ ಫಾರ್ ಐಎಎಸ್ ಸಂಸ್ಥೆಗಳಿಗೆ ಬೀಗ ಜಡಿಯಲಾಗಿದೆ.
ರಾವುಸ್ ಕೋಚಿಂಗ್ ಕೇಂದ್ರದಲ್ಲಿ ಯಾವುದೇ ರೀತಿಯ ಮೂಲಸೌಕರ್ಯಗಳನ್ನು ಕಲ್ಪಿಸಿಲ್ಲ ಎಂಬುದು ತನಿಖೆಯಿಂದ ಗೊತ್ತಾಗಿದೆ. ತುರ್ತು ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬೇಕಾದ ದಾರಿಗಳು ಇರಲಿಲ್ಲ. ಜೊತೆಗೆ, ಅನ್ಯರು ವಿದ್ಯಾರ್ಥಿಗಳನ್ನು ರಕ್ಷಿಸಲು ಬಂದಾಗ ಅಲ್ಲಿ ನಿಯಮಗಳನುಸಾರ ಇರಬೇಕಾದ ಯಾವುದೇ ಸಲಕರಣೆಗಾಗಲೀ ಇರಲಿಲ್ಲ ಎಂದು ಹೇಳಲಾಗಿದೆ.

