ಮೈಸೂರು:ಈ ಬಂಡೆ ಸಿದ್ದರಾಮಯ್ಯ ಜೊತೆಗಿದೆ. ನನ್ನ ಜೊತೆ 136 ಮಂದಿ ಶಾಸಕರಿದ್ದಾರೆ. ನಿಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯವಿಲ್ಲ, ಏ ಕುಮಾರಸ್ವಾಮಿ, ಏ ಅಶೋಕಾ, ಏ ವಿಜಯೇಂದ್ರ ನಿಮಗೆ ಸಿದ್ದರಾಮಯ್ಯನವರ ರಾಜೀನಾಮೆ ಬೇಕಾ? ನನ್ನನ್ನು ಮಾಧ್ಯಮದವರು ಬಂಡೆ ಎಂದು ಹೇಳಿದರು. ನಮ್ಮ ಸರ್ಕಾರವನ್ನು 10 ತಿಂಗಳಲ್ಲಿ ತೆಗೆಯುತ್ತೇವೆ ಎಂದು ಹುನ್ನಾರ ಮಾಡುತ್ತಿದ್ದಾರೆ. ನಮ್ಮ ಯೋಜನೆಗಳ ರಕ್ಷಣೆಗೆ ಈ ಹೋರಾಟ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುಟುರು ಹಾಕಿದ್ದಾರೆ.
ಮಹಾರಾಜ ಕಾಲೇಜಿನಲ್ಲಿ ನಡೆದ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ಜನರು ಅಧಿಕಾರಕ್ಕೆ ಬಂದ ಹಾಗೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ಜನರು ಅಧಿಕಾರಕ್ಕೆ ಬಂದ ಹಾಗೆ. ನಮ್ಮ ಜನಾಂದೋಲನ ರಾಜ್ಯದ, ಸಂವಿಧಾನದ ರಕ್ಷಣೆಗಾಗಿ ಎಂದರು.
ಕುಮಾರಸ್ವಾಮಿ ನಿನ್ನ ಅಧ್ಯಕ್ಷತೆಯಲ್ಲಿ ಜೆಡಿಎಸ್ 19 ಸೀಟ್ ಗೆದ್ದಿದೆ. ಈ ಡಿಕೆ ಶಿವಕುಮಾರ್ ನೇತೃತ್ವದಲ್ಲಿ 136 ಸ್ಥಾನ ಗೆದ್ದಿದೆ. ಬ್ರಿಟಿಷರಿಂದ ಕಾಂಗ್ರೆಸ್ ತೆಗೆಯಲು ಆಗಲಿಲ್ಲ. ನೀನು ಎರಡು ಜನ್ಮ ಎತ್ತಿದರೂ ನಮ್ಮನ್ನ ತೆಗೆಯಲು ಆಗುವುದಿಲ್ಲ ಕುಮಾರಸ್ವಾಮಿ ಎಂದು ಏಕವಚನದಲ್ಲೇ ಹರಿಹಾಯ್ದರು.
ಸಿದ್ದರಾಮಯ್ಯ ಧರ್ಮಪತ್ನಿ ಪಾರ್ವತಿ ಅವರ ಅಣ್ಣ ಅರಿಶಿನ ಕುಂಕುಮಕ್ಕೆ ಜಮೀನು ಕೊಟ್ಟಿದ್ದಾರೆ. ಸಾಮಾನ್ಯ ಜನರು ಅಕ್ಕ-ತಂಗಿಯರಿಗೆ ಜಮೀನು ಕೊಡುತ್ತಾರೆ. ಪಾರ್ವತಿ ಅವರಿಗೆ ಅದೇ ರೀತಿ ಕೊಟ್ಟಿದ್ದಾರೆ. ಅದು ಸಿದ್ದರಾಮಯ್ಯ ಅವರಿಗೆ ಗೊತ್ತಿರಲಿಲ್ಲ. ಡಿನೋಟಿಫೀಕೇಶನ್ ಆದ ಜಮೀನನ್ನು ಕೊಡಿ ಎಂದು ಪಾರ್ವತಿ ಅವರು ಕೇಳಿದ್ದಾರೆ.

